May 17, 2024

Bhavana Tv

Its Your Channel

ನವಗ್ರಹ ಸಮಿಧವನ ನಿರ್ಮಾಣ ಕಾರ್ಯಕ್ರಮ

ಯಲ್ಲಾಪುರ- ನವಗ್ರಹ ಸಮಿಧ ವನ, ಉಪನ್ಯಾಸ, ಸಂಗೀತ, ಮುದ್ರೆ, ಮಂತ್ರ ಸಂಯೋಜನೆಯ ಅಪರೂಪದ ಕಾರ್ಯಕ್ರಮ ಮನುಷ್ಯನಿಗೆ ಅನುಪಯುಕ್ತವಾದ ವಸ್ತು ಪ್ರಕೃತಿಯಲ್ಲಿ ಇಲ್ಲ ಆದರೆ ಯೋಗ್ಯವಾದುದನ್ನು ಗುರುತಿಸುವ ಕೆಲಸ ಆಗಬೇಕು ಎಂದು ಜ್ಯೋತಿಷ್ಯ ಆಚಾರ್ಯ ನಾಗೇಂದ್ರ ಭಟ್ಟ ಹಿತ್ಲಳ್ಳಿ ಅವರು ನುಡಿದರು. ಅವರು ಸಂಸ್ಕಾರ ಶಿಕ್ಷಣ ಸೇವಾ ಪ್ರತಿಷ್ಠಾನ ಯಲ್ಲಾಪುರ, ಪತಂಜಲಿ ಪರಿವಾರ ಹಿತ್ಲಳ್ಳಿ ಹಾಗೂ ಸಮಸ್ತ ನಾಗರಿಕರು ಹಿತ್ಲಳ್ಳಿ ಇವರ ಆಶ್ರಯದಲ್ಲಿ ನಡೆದ ನವಗ್ರಹ ಸಮಿಧ ವನ ನಿರ್ಮಾಣ ಕಾರ್ಯಕ್ರಮದ ನೇತೃತ್ವ ವಹಿಸಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು.
ಯೋಗ, ಆಯುರ್ವೇದದ ಕುರಿತಾಗಿ ಭಾರತದ ಸನಾತನ ಪರಂಪರೆಯಲ್ಲಿ ಹಲವು ಉತ್ಕೃಷ್ಟ ಗ್ರಂಥಗಳಲ್ಲಿ ಉಲ್ಲೇಖವಿದೆ. ಪುಸ್ತಕದಲ್ಲಿರುವ ವಿಷಯವನ್ನು ಕೇವಲ ಓದಿದ ಮಾತ್ರಕ್ಕೆ ಸಾಲದು ಅದನ್ನು ಪ್ರಯೋಗಾತ್ಮಕವಾಗಿ ಅಳವಡಿಸಿಕೊಂಡಾಗ ಕಲ್ಯಾಣ ಕಾರಕವಾಗುತ್ತದೆ. ಆ ಕೆಲಸವನ್ನು ಇಂದು ಸಂಸ್ಕಾರ ಶಿಕ್ಷಣ ಪ್ರತಿಷ್ಠಾನ, ಪತಂಜಲಿ ಹಾಗೂ ಹಿತ್ಲಳ್ಳಿ ಊರಿನ ನಾಗರಿಕರು ಮಾಡಿದ್ದಾರೆ ಎಂದು ಹರ್ಷಿಸಿದರು. ಲಕ್ಷ್ಮಿ ನರಸಿಂಹ ಮೂಲತ: ವನದೇವತೆ ಅವನ ಮೂಲಸ್ಥಾನ ಹಿತ್ಲಳ್ಳಿ. ಇಂದು ಭಾರತದಾದ್ಯಂತ ಆಂದೋಲನದ ರೂಪದಲ್ಲಿ ವನಸ್ಪತಿ ವನ ನಿರ್ಮಾಣವಾಗಿದ್ದರೆ ಅದರ ಹಿರಿಮೆ ಹಿತ್ಲಳ್ಳಿ ಕ್ಷೇತ್ರಕ್ಕೆ ಸಲ್ಲುತ್ತದೆ. ಆರ್ಥಿಕ, ಆಹಾರ, ಆಯುಷ್ಯ, ಆರೋಗ್ಯ ಈ ಚತುರ್ವಿಧ ಸಂಪತ್ತುಗಳು ನಮಗೆ ವನ ನಿರ್ಮಾಣದಿಂದ ಸಿದ್ಧಿಸುತ್ತವೆ ಇಂದು ಅಂತಹ ಪುಣ್ಯ ಕಾರ್ಯದಲ್ಲಿ ನಾವೆಲ್ಲ ಭಾಗಿಗಳಾಗಿ ಇರುವುದು ಸಂತಸ ತಂದಿದೆ ಎಂದು ಮಾರ್ಮಿಕವಾಗಿ ನುಡಿದರು.
ಶ್ರೀ ಎನ್.ವಿ ಹೆಗಡೆಯವರ ಜಾಗದಲ್ಲಿ ನವಗ್ರಹ ಸಮಿಧವನ ನಿರ್ಮಿಸಿ ಅಪರಾಹ್ನ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಸಂಸ್ಕಾರ ಸಭಾಕಾರ್ಯಕ್ರಮ ನೆರವೇರಿಸಲಾಯಿತು. ವೇದಿಕೆಯಲ್ಲಿ ನಾಗೇಂದ್ರ ಭಟ್ಟ ಹಿತ್ಲಳ್ಳಿ, ಪತಂಜಲಿ ಜಿಲ್ಲಾ ಸಂರಕ್ಷಕ ಶ್ರೀ ಜಿ.ಎನ್. ಹೆಗಡೆ ಶಿರಸಿ, ಪತಂಜಲಿ ಶಿರಸಿ ತಾಲೂಕು ಅಧ್ಯಕ್ಷ ಸೋಮ ಪ್ರಕಾಶ ಶೇಟ, ಕಾರ್ಯಕ್ರಮದ ಅಧ್ಯಕ್ಷರಾಗಿ ಪತಂಜಲಿ ಯಲ್ಲಾಪುರ ಅಧ್ಯಕ್ಷ ವಿ.ಕೆ ಭಟ್ಟ, ಸಂಸ್ಕಾರ ಶಿಕ್ಷಣ ಪ್ರತಿಷ್ಠಾನ ಕಾರ್ಯದರ್ಶಿ ಹಾಗೂ ಪತಂಜಲಿ ಜಿಲ್ಲಾ ಯುವ ಪ್ರಭಾರಿ ದಿವಾಕರ ಮರಾಠಿ, ಪಾರಂಪರಿಕ ವೈದ್ಯ ವಿಶ್ವನಾಥ ಶಿರಸಿ, ನಿವೃತ್ತ ದೈ.ಶಿ.ಶಿಕ್ಷಕ ಎನ್. ವಿ. ಹೆಗಡೆ, ಸಹಕಾರಿ ಸಂಘದ ಉಪಾಧ್ಯಕ್ಷ ಮಂಜುನಾಥ ಶೇಟ್ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ತರುವಾಯ ವೇದಿಕೆಯ ಮೇಲೆ ಸಂಗೀತ, ಮುದ್ರೆ ಮತ್ತು ಮಂತ್ರ ಸಂಯೋಜನೆಯ ಅಪರೂಪದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು, ಉತ್ತಮ ಆರೋಗ್ಯಕ್ಕಾಗಿ ವಿಶೇಷ ಮುದ್ರೆಗಳು ಅವುಗಳ ಮಹತ್ವದ ಕುರಿತು ಪತಂಜಲಿ ಜಿಲ್ಲಾ ಯೋಗ ವಿಸ್ತಾರಕ, ಶಿಕ್ಷಕ ಸುಬ್ರಾಯ ಭಟ್ಟ ಪ್ರಾಯೋಗಿಕ ಮಾಹಿತಿ ನೀಡಿದರು.ಅದಕ್ಕೆ ಸಂವಾದಿಯಾಗಿ ನಾದ, ಸೃಷ್ಟಿ ಮಾಯೆ, ಓಂಕಾರದ ಪೂರ್ಣತ್ವ ಕುರಿತಾಗಿ ಶಾರದಾಂಬಾ ಸಂಸ್ಕೃತ ಪಾಠಶಾಲೆಯ ಶಿಕ್ಷಕ ರಾಮನಾಥ ಭಟ್ಟ, ಶ್ರೀರಂಗ ಭಟ್ಟ ವಿವರಣೆ ನೀಡಿದರು. ಇದರ ಜೊತೆಯಲ್ಲಿ ಮನಸ್ಸನ್ನು ಭಗವಂತನಲ್ಲಿ ಸಾಕ್ಷಾತ್ಕಾರ ಗೊಳಿಸಲು ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನು ಖ್ಯಾತ ಹಿಂದೂಸ್ತಾನಿ ಗಾಯಕಿ ವಾಣಿ ರಮೇಶ ಯಲ್ಲಾಪುರ ಹಾಗ ವಿಭಾ ಹೆಗಡೆ ನಿಭಾಯಿಸಿದರು. ಅವರಿಗೆ ತಬಲಾದಲ್ಲಿ ಖ್ಯಾತ ತಬಲಾ ವಾದಕ ಗಣೇಶ ಗುಂಡ್ಕಲ್ ಸಂವಾದಿನಿಯಲ್ಲಿ ಸತೀಶ ಹೆಗ್ಗಾರ್ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ಹೆಗಡೆ ಸ್ವಾಗತಿಸಿದರು. ವಿನಾಯಕ ಭಟ್ಟ ವಂದಿಸಿದರು. ಗಜಾನನ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಭಾರತಿ ಹೆಗಡೆ, ರಚನಾ ಹೆಗಡೆ ಹಾಗೂ ಹಿತ್ಲಳ್ಳಿ ಊರಿನ ಸಮಸ್ತ ನಾಗರಿಕರು ಕಾರ್ಯಕ್ರಮ ಸಂಯೋಜನೆ ಗೊಳಿಸಿದ್ದರು

ವರದಿ:: ವೇಣುಗೋಪಾಲ ಮದ್ಗುಣಿ

error: