May 1, 2024

Bhavana Tv

Its Your Channel

ಬೆಚ್ಚಿಬೀಳಿಸುತ್ತಿರುವ ಧಾರಾವಿ: 100ರ ಗಡಿ ದಾಟಿದ ಸೋಂಕಿತರ ಸಂಖ್ಯೆ, ಮೃತರ ಸಂಖ್ಯೆ 10ಕ್ಕೆ ಏರಿಕೆ

ಮುಂಬೈ: ಹದಿನೈದು ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿರುವ ವಾಣಿಜ್ಯನಗರಿ ಮುಂಬೈನ ಕೊಳಚೆ ಪ್ರದೇಶ ಧಾರಾವಿಯಲ್ಲಿ ದಿನದಿನಕ್ಕೂ ಕರೊನಾ ಸೋಂಕಿತರ ಸಂಖ್ಯೆ ಏರತೊಡಗಿದೆ.

ಶುಕ್ರವಾರ ಧಾರಾವಿ ಕೊಳೆಗೇರಿಯಲ್ಲಿ ಸೋಂಕಿತರ ಪ್ರಮಾಣ 100ರ ಗಡಿ ದಾಟಿದ್ದು, ಆತಂಕ ಮತ್ತಷ್ಟು ಉಲ್ಬಣಿಸಿದೆ. ಕಳೆದ 24 ತಾಸಿನಲ್ಲಿ 15 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆಯಾಗಿದೆ.

ಜತೆಗೆ ಇಲ್ಲಿನ 62 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಧಾರಾವಿ ಕೊಳೆಗೇರಿಯಲ್ಲಿ ಸುಮಾರು 15 ಲಕ್ಷ ಜನರು ಚಿಕ್ಕ ಚಿಕ್ಕ ಗುಡಿಸಲುಗಳಲ್ಲಿ ವಾಸಿಸುತ್ತಿರುವುದರಿಂದ ಇಲ್ಲಿ ಸಾಮಾಜಿಕ ಅಂತರವೆಂಬುದು ಮರೀಚಿಕೆ. ಹದಿನೈದಿಪ್ಪತ್ತು ಮನೆಗಳಿಗೊಂದು ಶೌಚಾಲಯ ಇದೆ. ಸ್ವಚ್ಛತೆಯೂ ಅಷ್ಟಕ್ಕಷ್ಟೆ. ಜನ ಲಾಕ್‌ಡೌನ್ ನಿಯಮ ಪಾಲಿಸಲಾಗದೆ ಪರದಾಡುವಂತಾಗಿದೆ. ಹಾಗಾಗಿ ಕರೊನಾ ಸೋಂಕು ಪಸರಿಸಿದರೆ ಪರಿಸ್ಥಿತಿ ಸಂಪೂರ್ಣ ಕೈಮೀರುವ ಆತಂಕ ಎದುರಾಗಿದೆ.

ಈ ನಡುವೆ, ಇಡೀ ಭಾರತದಲ್ಲಿ ಕರೊನಾ ವೈರಸ್‌ಗೆ ಕಳೆದ 24 ತಾಸಿನಲ್ಲಿ 10 ಜನರು ಬಲಿಯಾಗಿದ್ದು, ಮೃತರ ಸಂಖ್ಯೆ 457ಕ್ಕೆ ಏರಿಕೆಯಾಗಿದೆ. ಹೊಸದಾಗಿ 388 ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 13,816ಕ್ಕೆ ಏರಿದೆ. ಸದ್ಯ ದೇಶದಲ್ಲಿ ಒಟ್ಟು 11,490 ಸಕ್ರೀಯ ಪ್ರಕರಣಗಳಿದ್ದು, ಶುಕ್ರವಾರ ಒಂದೇ ದಿನ 196 ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ ಗುಣಮುಖರಾದವರ ಸಂಖ್ಯೆ 1,964ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಹರಿಯಾಣ, ಕೇರಳ, ಆಂಧ್ರಪ್ರದೇಶ, ರಾಜಸ್ಥಾನದಲ್ಲೂ ಹಲವರ ಆರೋಗ್ಯ ಸುಧಾರಿಸಿದೆ. ದೇಶದಲ್ಲಿ ಈವರೆಗೆ ಗುಣಮುಖರಾಗಿರುವವರ ಪ್ರಮಾಣದಲ್ಲಿ ಮಹಾರಾಷ್ಟ್ರ ಹಾಗೂ ಕೇರಳ ಪ್ರಮುಖವಾಗಿವೆ. ಸುಮಾರು 3 ಸಾವಿರ ಸೋಂಕು ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಶೇ.10 ಅಂದರೆ ಸುಮಾರು 300 ಜನರು ಗುಣಮುಖರಾಗಿದ್ದಾರೆ. ಕೇರಳ 395 ಪ್ರಕರಣ ಹೊಂದಿದ್ದು, ಅದರ ಶೇ.62 ರಷ್ಟು ಅಂದರೆ 245 ರೋಗಿಗಳು ಗುಣಮುಖರಾಗಿದ್ದಾರೆ. ಆದರೆ ದೆಹಲಿಯಲ್ಲಿ ಮಾತ್ರ ಗುಣಮುಖರಾಗುತ್ತಿರುವವರ ಪ್ರಮಾಣ ಅತ್ಯಂತ ಕಡಿಮೆ ಇದೆ. ದೆಹಲಿಯಲ್ಲಿನ 1,640 ಸೋಂಕು ಪ್ರಕರಣಗಳಲ್ಲಿ ಈವರೆಗೆ ಕೇವಲ 52 ಜನರು ಮಾತ್ರ ಗುಣಮುಖರಾಗಿದ್ದಾರೆ.

ಗುಜರಾತ್‌ನಲ್ಲಿ ಕಳೆದ 24 ತಾಸಿನಲ್ಲಿ ಹೊಸದಾಗಿ 170 ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1,099ಕ್ಕೆ ಏರಿಕೆಯಾಗಿದೆ. ಶುಕ್ರವಾರ ಮತ್ತಿಬ್ಬರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಅಹಮದಾಬಾದ್, ಸೂರತ್, ವಡೋದರಾ, ಭಾರುಚ್‌ನಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಯಂತಿ ರವಿ ಮಾಹಿತಿ ನೀಡಿದ್ದಾರೆ. ಜತೆಗೆ ತಮಿಳುನಾಡು, ರಾಜಸ್ಥಾನ, ಜಮ್ಮು ಕಾಶ್ಮೀರ, ಕರ್ನಾಟಕ ಸೇರಿದಂತೆ ಹಲವೆಡೆ ಸೋಂಕಿತರ ಪ್ರಮಾಣ ಏರಿಕೆ ಕಾಣುತ್ತಿದೆ.

source : dailyhunt

error: