April 29, 2024

Bhavana Tv

Its Your Channel

ತಾಲ್ಲೂಕು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಂದ ಪ್ರತಿಭಟನೆ

ಬಾಗೇಪಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ ನೀಡುತ್ತಿರುವುದನ್ನು ವಿರೋಧಿಸಿ ಹಾಗೂ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಾಗೇಪಲ್ಲಿ ತಾಲ್ಲೂಕು ಬಿಇಓ ಕಚೇರಿಯಲ್ಲಿ ತಾಲೂಕು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೋಮವಾರ ಶಾಂತಿಯುತ ಪ್ರತಿಭಟನೆಯನ್ನು ನಡೆಸಿ ಬಾಗೇಪಲ್ಲಿ ತಾಲ್ಲೂಕು ಬಿಇಓ ಎಸ್ ಸಿದ್ದಪ್ಪ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಪಿ.ವಿ.ವೆಂಕಟರವಣ ಮಾತನಾಡಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾರಕವಾಗಿರುವ ವೃಂದ ನೇಮಕಾತಿ ನಿಯಮಾವಳಿ ಹಿಂಪಡೆಯಬೇಕು. ಆ ನಿಯಮಾವಳಿಯಂತೆ ೧ ರಿಂದ ೮ ನೇ ತರಗತಿಗೆ ಶಿಕ್ಷಕರನ್ನು ೫ ನೇ ತರಗತಿ ಸೀಮಿತಗೊಳಿಸಿ ಹಿಂಬಡ್ತಿ ನೀಡಿ, ಹೊಸ ನೇಮಕಾತಿಯನ್ನು ಆರಂಭಿಸಿರುವುದು ಅನ್ಯಾಯ. ಈಗಾಗಲೇ ಬಡ್ತಿ ಪಡೆದು ೮ ನೇ ತರಗತಿಯವರೆಗೆ ಬೋಧಿಸುತ್ತಿರುವ ಶಿಕ್ಷಕರು, ಪದವೀಧರ ಶಿಕ್ಷಕರಿಗೆ (ಎಜಿಟಿ) ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ಹಿಂಬಡ್ತಿ ನೀಡಲು ಮುಂದಾಗಿರುವ ಸರ್ಕಾರದ ನೀತಿಯು ಅವೈಜ್ಞಾನಿಕವಾಗಿದೆ. ಮಕ್ಕಳ ಭವಿಷ್ಯ ರೂಪಿಸುವವರ ಬಗ್ಗೆ ಸರ್ಕಾರ ಇಷ್ಟು ಕಟುವಾಗಿ ನಡೆದುಕೊಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಸ ನೇಮಕಾತಿ ಪ್ರಕ್ರಿಯೆ ಆರಂಭವಾದಲ್ಲಿ ರಾಜ್ಯದ ಹಿರಿಯ ಪ್ರಾಥಮಿಕ ಶಾಲೆಗಳ ಸುಮಾರು ೫೨ ಸಾವಿರ ಸೇವಾ ನಿರತ ಶಿಕ್ಷಕರನ್ನು ಕಿರಿಯ ಪ್ರಾಥಮಿಕ ಶಾಲೆಗಳಿಗೆ ಹಿಂಬಡ್ತಿ ನೀಡಬೇಕಾಗುತ್ತದೆ. ಅಲ್ಲದೆ ಅಷ್ಟೇ ಪ್ರಮಾಣದ ಕಿರಿಯ ಪ್ರಾಥಮಿಕ ಶಿಕ್ಷಕರನ್ನು ಹೆಚ್ಚುವರಿಯಾಗಿ ವರ್ಗಾವಣೆ ಮಾಡಬೇಕಾಗುತ್ತದೆ. ಇದರಿಂದ ಶಿಕ್ಷಕರಿಗೆ ತೊಂದರೆ ಆಗುವ ಜತೆಗೆ ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗಲಿದೆ ಎಂದು ತಿಳಿಸಿದರು.

ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಪೈಕಿ ಪದವಿ, ಬಿ.ಇಡಿ, ಎಂ.ಇಡಿ ಹಾಗೂ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪಡೆದಿರುವ ೮೨ ಸಾವಿರ ಶಿಕ್ಷಕರಿದ್ದಾರೆ. ಇವರು ೮ ನೇ ತರಗತಿವರೆಗೆ ಬೋಧಿಸಲು ಅರ್ಹರಲ್ಲ ಎಂದು ಹೊಸ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಇಲಾಖೆ ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಖಾರವಾಗಿ ಪ್ರಶ್ನಿಸಿದರು.
ತಾಲೂಕಿನಾದ್ಯಂತ ಶಿಕ್ಷಕರು ಸೇವಾ ನಿರತ ಪದವಿ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವವರೆಗೂ ನಿಷ್ಠಾ ೩.೦ ಲಾಗಿನ್ ಆಗದೇ ತರಬೇತಿಯನ್ನು ಬಹಿಷ್ಕಾರಿಸಲು ತೀರ್ಮಾನಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್. ವೇಣು ಗೌರಾವಾಧ್ಯಕ್ಷರು,ಪ್ರಭಾವತಿ ಜಿಲ್ಲಾ ಮಹಿಳಾ ಉಪಾಧ್ಯಕ್ಷೆ, ಹೆಚ್.ಎಸ್. ವರುಣ್ ಖಜಾಂಚಿ, ವಿ.ಸುಮಾ ತಾ.ಮಹಿಳಾ ಉಪಾಧ್ಯಕ್ಷೆ, ಕೆ.ಎಸ್.ಶ್ರೀನಿವಾಸ್ ಹಾಗೂ ಪ್ರಭಾಕರ್ ನಾಮನಿರ್ದೇಶನ ಸದಸ್ಯರು ಇದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: