April 25, 2024

Bhavana Tv

Its Your Channel

ಲಾಕ್‌ಡೌನ್ ಅವಧಿಯಲ್ಲಿ ೨೦೪ ಹೃದಯ ಕಾಪಾಡಿದ ಸಿಎಡಿ

ಹೊನ್ನಾವರ; ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥರಾದ ಡಾ. ಪದ್ಮನಾಭ ಕಾಮತ್ ಇವರ ಸೂತ್ರಧಾರಿಕೆಯಲ್ಲಿರುವ ಕಾರ್ಡಿಯಾಕ್ ಎಟ್ ಡೋರ್ ಸ್ಟೆಪ್ (ಸಿಎಡಿ) ಮನೆಬಾಗಿಲೆಗೆ ಹೃದಯ ವೈದ್ಯರು ತಂಡ ಲಾಕ್‌ಡೌನ್‌ನ ೫೫ದಿನಗಳಲ್ಲಿ ಹೃದಯಾಘಾತಕ್ಕೊಳಗಾದ ೨೦೪ ಜನರಿಗೆ ಸಕಾಲದಲ್ಲಿ ಸೂಕ್ತ ಸಲಹೆ ಹಾಗೂ ಔಷಧ ಸಿಗುವಂತೆ ಮಾಡಿ ಜೀವ ಉಳಿಸುವಲ್ಲಿ ಮಹತ್ವದ ದಾಖಲೆ ಮಾಡಿದೆ.


ಉತ್ತರ ಕನ್ನಡ ಸಹಿತ ರಾಜ್ಯದ ೨೩೦ ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ಇಸಿಜಿ ಯಂತ್ರವನ್ನು ನೀಡಿರುವ ಸಿಎಡಿ ಬಳಗ ಆ ವೈದ್ಯರಿಂದ ಎದೆ ನೋವು ಬಂದ ಅಥವಾ ಹೃದಯಾಘಾತಕ್ಕೊಳಗಾದ ಸೂಚನೆ ಇರುವ ವ್ಯಕ್ತಿಯ ಇಸಿಜಿ ವರದಿಯನ್ನು ತರಿಸಿಕೊಂಡು ಸಕಾಲದಲ್ಲಿ ಸಲಹೆ ನೀಡುತ್ತ ಬಂದಿದೆ. ಲಾಕ್‌ಡೌನ್ ಅವಧಿಯಲ್ಲಿ ಬಹುಪಾಲು ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದವು. ಸಮಾಜದ ಬೆನ್ನೆಲುಬಾದ ಸರ್ಕಾರಿ ಆಸ್ಪತ್ರೆಗಳು ತೆರೆದಿದ್ದವು. ಉತ್ತರ ಕನ್ನಡ ಸಹಿತ ರಾಜ್ಯದ ನಾನಾಭಾಗದ ಸರ್ಕಾರಿ ಆಸ್ಪತ್ರೆಯ ವೈದ್ಯರುಗಳು ಲಾಕ್‌ಡೌನ್ ಅವಧಿಯಲ್ಲಿ ೨೧೦ ಇಸಿಜಿ ವರದಿಗಳನ್ನು ಕಳಿಸಿದ್ದರು. ಅವುಗಳಲ್ಲಿ ೨೦೪ಜನಕ್ಕೆ ಹೃದಯಾಘಾತವಾದದ್ದು ಖಚಿತಪಟ್ಟ ಕಾರಣ ಇಸಿಜಿ ವರದಿ ಕಳಿಸಿದ ವೈದ್ಯರಿಗೆ ತುರ್ತು ಚಿಕಿತ್ಸೆ ನೀಡಲು ಮತ್ತು ಸಮೀಪದ ಕ್ಯಾಥ್ ಲ್ಯಾಬ್ ಇರುವ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಲಾಗಿತ್ತು. ಉತ್ತರ ಕನ್ನಡದ ಯಲ್ಲಾಪುರ, ಮುರ್ಡೇಶ್ವರ, ಜೋಯ್ಡಾ, ಶಿರ್ಸಿ, ಮೊದಲಾದ ಊರುಗಳಿಂದ ಸರ್ಕಾರಿ ವೈದ್ಯರು ಇಸಿಜಿ ವರದಿ ಕಳಿಸಿದ್ದರು ಅವರಲ್ಲಿ ೧೫ಜನರಿಗೆ ಹೃದಯಾಘಾತವಾಗಿರುವುದು ಖಚಿತಪಟ್ಟಾಗ ಕರಾವಳಿಯವರಿಗೆ ಉಡುಪಿ, ಮಂಗಳೂರು ಮತ್ತು ಘಟ್ಟದ ಮೇಲಿನವರಿಗೆ ಹುಬ್ಬಳ್ಳಿ, ಧಾರವಾಡ ಹೋಗುವಂತೆಯೂ ಸಲಹೆ ನೀಡಲಾಗಿತ್ತು.
ಮೈಸೂರು – ೨೦, ಚಿತ್ರದುರ್ಗ – ೨೮, ಮಂಡ್ಯ – ೧೫, ಹಾಸನ – ೧೩, ಬೆಂಗಳೂರು ಗ್ರಾಮಾಂತರ – ೧೪, ದಕ್ಷಿಣ ಕನ್ನಡ – ೨೨, ದಾವಣಗೆರೆ – ೧೦, ಬಾಗಲಕೋಟ – ೮, ಧಾರವಾಡ – ೫, ಇತರ ೫೪ ಹೀಗೆ ಒಟ್ಟಿಗೆ ೨೦೪ ಜನರ ಹೃದಯವನ್ನು ಕಾಪಾಡಲು ಸಾಧ್ಯವಾಯಿತು. ೫೫ ದಿನಗಳಲ್ಲಿ ರಸ್ತೆಗಳು ಬಂದ್ ಆಗಿದ್ದವು, ವಾಹನ ಸಂಚಾರ ಇರಲಿಲ್ಲ. ಖಾಸಗಿ ಆಸ್ಪತ್ರೆಗಳು ಸ್ಥಗಿತವಾಗಿದ್ದವು. ಇಂತಹ ಪರಿಸ್ಥಿತಿಯಲ್ಲಿ ಹೃದಯಾಘಾತಕೊಳ್ಳಗಾದವರ ಜೀವ ಉಳಿಸಲು ಸಂಜೀವಿನಿಯ0ತೆ ಸಿಎಡಿ ಒದಗಿಸಿದ ಇಸಿಜಿಗಳು ಮತ್ತು ಇದನ್ನು ಪಡೆದ ವೈದ್ಯರು ಕಾರಣರಾಗಿದ್ದಾರೆ. ಎಲ್ಲ ಸಂದರ್ಭದಲ್ಲಿ ಮಾತ್ರವಲ್ಲ ತುರ್ತು ಸಂದರ್ಭದಲ್ಲಿ ತಾವು ಆರಂಭಿಸಿದ ಯೋಜನೆ ಅತ್ಯಂತ ಉಪಯುಕ್ತ ಎಂಬುದು ಸಾಬೀತಾಗಿದ್ದು ಧನ್ಯತೆ ಎನಿಸಿದೆ. ಸಹಕರಿಸಿ, ಸಲಹೆ ಪಡೆದ ಎಲ್ಲ ವೈದ್ಯರಿಗೆ ಮತ್ತು ಆರೋಗ್ಯವಂತರಾಗಿ ಉಳಿದಿರುವ ೨೦೪ ಜನಕ್ಕೆ ಅಭಿನಂದನೆಗಳು. ರಾಷ್ಟçಮಟ್ಟದಲ್ಲಿ ಇಂತಹ ಯೋಜನೆ ಜಾರಿಗೆ ಬಂದರೆ ವರ್ಷ ಸಾವಿರಾರು ಜನರನ್ನು ಉಳಿಸಬಹುದಾಗಿದೆ ಎಂದು ಡಾ. ಕಾಮತ್ ಹೇಳಿದ್ದಾರೆ.

error: