May 18, 2024

Bhavana Tv

Its Your Channel

ಹಾಲಕ್ಕಿ ಮಹಿಳೆಯ ಮೀನುಗಾರಿಕೆ ಕಸಬು

ಗೋಕರ್ಣ: ‘ಕಾಡಿನ ರಾಜ ಸಿಂಹ ವೇ ಆದರೂ ಕುಳಿತಲ್ಲಿಯೇ ಎಲ್ಲಾ ಚಿಕ್ಕ ಪ್ರಾಣಿಗಳು ಬಾಯಲ್ಲೇ ಬಂದು ಬೀಳುವದಿಲ್ಲ.ಬಲಿಷ್ಠ ಪ್ರಾಣಿಯಾದರೂ ಕೂಡ ಪ್ರಯತ್ನ ಪಡಲೇಬೇಕು’-ಎಂಬ ಲೋಕೋಕ್ತಿಯಂತೆ ಪ್ರಯತ್ನ ಮಾಡಿದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ನಮ್ಮ ಊರಿನ ಅಪರೂಪದ ಸಾಧಕಿಯ ಪರಿಚಯ ಮಾಡುವುದಕ್ಕೆ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ.
ಬದುಕು ಕಟ್ಟಿಕೊಳ್ಳಲು ಯಾವ ಜಾತಿಯಾದರೇನು? ಯಾವ ಕಸುಬಾದರೇನು? ಸ್ವಂತ ನಿಲುವಿನಲ್ಲಿ ಬದುಕುವದು ಮುಖ್ಯ.ಅರ್ಧಾಂಗವಾಯು ರೋಗಕ್ಕೆ ರಾಮಬಾಣ ಎಂದು ಪ್ರಖ್ಯಾತಿಯಾದ ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ಹಂದಗೋಡ ಎಂಬ ಪುಟ್ಟ ಹಳ್ಳಿಯ ಹಾಲಕ್ಕಿ ಮಹಿಳೆಯ ದಿಟ್ಟತನ ಮೆಚ್ಚುವಂತದ್ದು. ಸೀತೆ ಎಂಬ ಮಹಿಳೆ, ಹಾಲಕ್ಕಿ ಸಮಾಜದ ಬಡ ಕುಟುಂಬದವಳು. ವಿಷ್ಣು ದೊಳ್ಳ ಗೌಡ ಹಾಗೂ ಸೀತೆ ವಿಷ್ಣು ಗೌಡ ದಂಪತಿಗೆ ಇಬ್ಬರು ಮಕ್ಕಳು. ಇವರು ತಮ್ಮ ಬದುಕಿಗೆ ಆರಿಸಿಕೊಂಡ ಕಸಬು ಮೀನುಗಾರಿಕೆ. .ಸೀತೆ ತಾಯಿಯ ಮನೆಯಲ್ಲಿ ಗದ್ದೆ ಕೆಲಸ ಮಾಡಿದವಳು.ಗಂಡ ವಿಷ್ಣು ಮೀನುಗಾರರ ಜೊತೆ ಕೆಲಸಕ್ಕೆ ಸೇರಿ ಮೀನು ಹಿಡಿಯುವ ಕೆಲಸದಲ್ಲಿ ಕರಗತನಾದನು.ಸುಮಾರು 10 ವರ್ಷಗಳ ಕಾಲ ‘ಜಲಲಕ್ಷ್ಮೀ’ ಎಂಬ ಬೋಟ್ ನಲ್ಲಿ ಕೆಲಸ ಮಾಡಿದನು. ತದನಂತರ ಬೇಲೇಕೇರಿ ,ಕಾರವಾರ ಹಾಗೂ ಮಂಗಳೂರಿನ ವರೆಗೂ ದುಡಿದವನು.ಈತ ಕೇವಲ ಮೀನು ಹಿಡಿಯುವ ಕಲೆಯಷ್ಟೇ ಅಲ್ಲದೆ ಬಲೆ ನೆಯುವ ಕಾಯಕದಲ್ಲೂ ತುಂಬಾ ಪ್ರವೀಣನಾಗಿದ್ದನು.ಹಾಗಾಗಿ ಹೆಂಡತಿಗೂ ಸಹ ದೋಣಿ’ ಬಲೆ ನೇಯುವ ಕಾಯಕ ಕರಗತವಾಯಿತು.ಬಹುಶಃ ನನ್ನ ಗಮನಕ್ಕೆ ಬಂದ ಹಾಗೆ ಮೀನುಗಾರರ ಕುಲದಲ್ಲಿ ಹುಟ್ಟಿದವರಿಗೂ ಸೀತೆಯಷ್ಟು ಚೆನ್ನಾಗಿ ಬಲೆ ನೇಯುವ ಕಾಯಕ ಯಾವ ಮೀನುಗಾರ ಮಹಿಳೆಗೂ ಗೊತ್ತಿಲ್ಲವೆಂದೇ ಹೇಳಬಹುದು ಅಷ್ಟರ ಮಟ್ಟಿಗೆ ಅಪರೂಪದ ಸಾಧಕಿ.ಏಕೆಂದರೆ ಬಲೆ ನೇಯುವ ಕಾಯಕ ಅಷ್ಟೊಂದು ಕಷ್ಟಕರವಾಗಿದೆ.ಶೇಕಡಾ 90%ರಷ್ಟು ಬಲೆ ಯಂತ್ರಗಳಿಂದ ನಿರ್ಮಾಣವಾಗುತ್ತದೆ. ಆದರೆ ಶೇಕಡಾ ೧೦%ರಷ್ಟು ಕೈಯಿಂದ ನೇಯಬೇಕಾಗುತ್ತದೆ.ತದನಂತರ ನಮಗೆ ಬೇಕಾದ ರೀತಿಯಲ್ಲಿ ಕೈ ನೇಯಿಗೆಯಿಂದ ಸಿದ್ಧತೆ ಮಾಡುತ್ತಾರೆ.ಈ ಕಾಯಕವನ್ನು ಶೇಕಡಾ ೧೦೦%ರಷ್ಟು ಗಂಡಸರೇ ನೇಯುತ್ತಾರೆ.ಹಾಗಾಗಿ ಸೀತೆಯ ಕಾಯಕವನ್ನು ನೋಡಿ ಗಂಡಸರೇ ಬೆರಗಾಗುತ್ತಾರೆ.
ಸೀತೆಯು ಏಂಡಿ ಬಲೆ (ಎಳೆ ಬಲೆ)ಯ ಸಹಾಯದಿಂದ ಮೀನು ಹಿಡಿಯುವುದು ವಿಸ್ಮಯವೇ ಸರಿ.ಸಮುದ್ರದಲ್ಲಿ ‘ದೋಣಿ’ ಎಂಬ ಹೆಸರಿನ ಪುಟ್ಟ ನಾವೆ.ಈ ದೋಣಿಗೆ ಅಂಡಮಾನ್ ನಲ್ಲಿ ‘ಡೋಂಗ್ರಿ’ ಎಂದು ಕರೆಯುವರು.ಈ ದೋಣಿಯ ಮೂಲಕ ಸ್ವಲ್ಪ ಪ್ರಮಾಣದಲ್ಲಿ ಮೀನು ಹಿಡಿಯುವ ಅನೇಕ ಮೀನುಗಾರ ಬೇಸಾಯ ಕುಟುಂಬಗಳಿವೆ. ಹೆಚ್ಚು ಗಾಳಿಯಿರದ ಕೊಲ್ಲಿ ಪ್ರದೇಶದಲ್ಲಿ ಮಾತ್ರ ದೋಣಿಯ ಮೂಲಕ ಮೀನು ಹಿಡಿಯುತ್ತಾರೆ.ದೋಣಿಯ ಮೂಲಕ ಏಂಡಿಬಲೆ,ಚಿಟ್ ಬಲೆ ಮತ್ತು ಗಾಳ ಹಾಕಿ ಮೀನು ಹಿಡಿಯುತ್ತಾರೆ.ಈ ದೋಣಿಗೆ ಯಂತ್ರಗಳು ಅಳವಡಿಸುವುದಿಲ್ಲ.ಸಮುದ್ರ ತಟದಲ್ಲಿ ಹೆಚ್ಚು ಗಾಳಿಯಿರದ ಪ್ರದೇಶದಲ್ಲಿ ಹುಟ್ಟು ಬಳಸಿ ದೋಣಿ ಚಲಾಯಿಸುತ್ತಾರೆ.ಸೀತೆಯು ಇವುಗಳಲ್ಲಿ ಒಂದಾದ ಏಂಡಿ ಬಲೆ ಹಾಕುವುದರಲ್ಲಿ ನಿಸ್ಸೀಮಳು.ಏಂಡಿ ಬಲೆ ಹಾಕಬೇಕಾದರೆ ದೋಣಿಯಲ್ಲಿ ಕನಿಷ್ಟ ಇಬ್ಬರು ಇರಲೇಬೇಕು. ದೋಣಿಯ ಎರಡೂ ಬದಿಯಲ್ಲಿ ಒಬ್ಬೊಬ್ಬರು ಇರಲೇಬೇಕು. ಒಂದು ಬದಿಯಲ್ಲಿ ಚುಕ್ಕಾಣಿ ಹಿಡಿದು ಬಲೆ ಹಾಕಿದರೆ ಇನ್ನೊಂದು ತುದಿಯಲ್ಲಿ ಹುಟ್ಟು ಹಿಡಿದು ಬಲೆ ಬಿಡುವುದು. ಇಬ್ಬರದೂ ಕಷ್ಟದ ಕೆಲಸವೇ.ಆದರೆ ಸ್ವಲ್ಪವೂ ಈಜು ಬಾರದ ದೇಸೀಯ ಉಡುಪು ಸೀರೆ ಉಟ್ಟುಕೊಂಡೇ ಏಂಡಿ ಬಲೆ ಹಾಕುವುದು ಬಲೂ ಅಪರೂಪ. ಅದರಲ್ಲೂ ಜುಲೈ, ಅಗಸ್ಟ ತಿಂಗಳುಗಳಲ್ಲಿ ಕಾವಿಗೆ ಕುಂತ ಹೇಂಟೆಯಂತೆ ಯಾವ ಸಂದರ್ಭದಲ್ಲಾದರೂ ಸಮುದ್ರದ ಕಡಲಿನ ಅಬ್ಬರದಿಂದ ದೋಣಿ ಕವಚಿ ಹೋಗುವ ಅಪಾಯ ಎದುರಾಗುತ್ತದೆ. ಇಂತಹ ಸಂದರ್ಭಗಳಲ್ಲೂ ಗಂಡಸರಂತೆ;ಈಜು ಬಲ್ಲವರಂತೆ ಮೀನು ಹಿಡಿಯುವ ಕಾಯಕದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಳು. ಸೀತೆಯದು ತುಂಬು ಕುಟುಂಬ. ಇಬ್ಬರು ಗಂಡು ಮಕ್ಕಳು. ಈಗ ಸೀತೆಗೆ ಸಂಸಾರದ ಭಾರ ಕಡಿಮೆಯಾಗಿದೆ.ಮಕ್ಕಳು ಈ ಕಸುಬು ಮುಂದುವರಿಸಿಕೊಂಡು ಹೋಗಿದ್ದಾರೆ.ಇಬ್ಬರ ಮಕ್ಕಳ ಮದುವೆಯೂ ಮಾಡಿಸಿದ್ದಾಳೆ.ಒಬ್ಬ ಮೊಮ್ಮಗನೂ ಇದ್ದಾನೆ.ನಾನು ಅವರ ಮನೆಗೆ ಹೋದಾಗ ಈಗಲೂ ಕನ್ನಡಕವನ್ನು ಧರಿಸಿ ಹರಿದ ಬಲೆ ನೇಯುತ್ತಾ ಕುಳಿತುಕೊಡ್ಡಿದಳು.
ವರದಿ-
ಮಹಾದೇವ ಬೊಮ್ಮು ಗೌಡ
ವಿಜ್ಞಾನ ಶಿಕ್ಷಕರು
ಸೆಕೆಂಡರಿ ಹೈಸ್ಕೂಲ್.ಹಿರೇಗುತ್ತಿ.

error: