May 12, 2024

Bhavana Tv

Its Your Channel

ಸಚಿವ ಡಾ.ನಾರಾಯಣಗೌಡರಿಗೆ “ಗಂಗಾಪುತ್ರ” ಬಿರುದು ನೀಡಿದ ಆಚಮನಹಳ್ಳಿ-ಯಲಾದಹಳ್ಳಿ ಗ್ರಾಮಸ್ಥರು .

ಮಂಡ್ಯ: ಕಟ್ಟೆಗಳನ್ನು ಗೂಡೆಹೊಸಳ್ಳಿ ಏತನೀರಾವರಿ ಯೋಜನೆಯ ಮೂಲಕ ತುಂಬಿಸಲು ಮುಂದಾದ ಕ್ಷೇತ್ರದ ಶಾಸಕ ರಾಜ್ಯದ ತೋಟಗಾರಿಕೆ, ಪೌರಾಡಳಿತ, ರೇಷ್ಮೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡರಿಗೆ ಗಂಗಾಪುತ್ರ ಬಿರುದು ನೀಡಿದ ಆಚಮನಹಳ್ಳಿ-ಯಲಾದಹಳ್ಳಿ ಗ್ರಾಮಸ್ಥರು . ಕೃಷ್ಣರಾಜಪೇಟೆ ತಾಲ್ಲೂಕಿನ ಬರಪೀಡಿತ ಸಂತೆಬಾಚಹಳ್ಳಿ ಹೋಬಳಿಯ ಆಚಮನಹಳ್ಳಿ-ಯಲಾದಹಳ್ಳಿ ಕೆರೆಯು ೨೦ವರ್ಷಗಳ ನಂತರ ಭರ್ತಿಯಾಗಿ ಕೋಡಿಬಿದ್ದ ಹಿನ್ನೆಲೆಯಲ್ಲಿ ಸಚಿವ ಡಾ.ನಾರಾಯಣಗೌಡ ಗಂಗಾಮಾತೆಗೆ ಬಾಗಿನ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಗ್ರಾಮದಿಂದ ಮೂರು ಕಿ.ಮೀ ದೂರಲ್ಲಿ ಹಾದುಹೋಗಿರುವ ಹೇಮಾವತಿ ಜಲಾಶಯ ಯೋಜನೆಯ ಎ.ಜಿ.ರಾಮಚಂದ್ರರಾವ್ ನಾಲೆಯ ಬಳಿ ಪಂಪ್ ಹೌಸ್ ನಿರ್ಮಿಸಿ ಪೈಪ್ ಲೈನ್ ಅಳವಡಿಸಿ ಕೆರೆಗೆ ನೀರು ತುಂಬಿಸಲು ತಮ್ಮ ತಂದೆತಾಯಿಗಳಾದ ಪುಟ್ಟಮ್ಮ ಚಿಕ್ಕೇಗೌಡರ ಹೆಸರಿನಲ್ಲಿ ೬ಲಕ್ಷರೂ ಹಣವನ್ನು ವಯಕ್ತಿಕವಾಗಿ ನೀಡಿದ್ದನ್ನು ಸ್ಮರಿಸಿದ ಗ್ರಾಮಸ್ಥರು ಸಚಿವ ನಾರಾಯಣಗೌಡರಿಗೆ ‘ಗಂಗಾಪುತ್ರ’ ಬಿರುದು ನೀಡಿ ಗೌರವಿಸಿದರು.

ಆಚಮನಹಳ್ಳಿ ಗ್ರಾಮದಲ್ಲಿ ಗ್ರಾಮದ ೧೦ಲಕ್ಷರೂ ವೆಚ್ಚದ ಮುಖ್ಯ ರಸ್ತೆಯ ಅಭಿವೃದ್ಧಿಗೆ ಭೂಮಿಪೂಜೆ ಮಾಡಿದ ಸಚಿವ ನಾರಾಯಣಗೌಡ ತಾಲ್ಲೂಕಿನ ಅಭಿವೃದ್ಧಿಗಾಗಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರಿ ೩ನೇ ಬಾರಿಗೆ ಶಾಸಕನಾಗಿ ಪ್ರಮುಖವಾದ ಮೂರು ಖಾತೆಗಳಿಗೆ ಸಚಿವನಾಗಿದ್ದೇನೆ. ಬಡತನದಲ್ಲಿ ನೊಂದು ಬೆಂದು ಮುಂಬೈ ಮಹಾನಗರದಲ್ಲಿ ಬದುಕು ಕಟ್ಟಿಕೊಂಡ ನನಗೆ ರೈತಾಪಿ ವರ್ಗದ ಕಷ್ಟಸುಖಗಳು ಚೆನ್ನಾಗಿ ಗೊತ್ತಿದೆ. ಮುಂಬೈ ಮಹಾನಗರಿಯಲ್ಲಿ ಉದ್ಯಮಿಯಾಗಿದ್ದ ನಾನು ಸಮಾಜಸೇವೆ ಮಾಡಲು ಜನ್ಮಭೂಮಿ ಕೃಷ್ಣರಾಜಪೇಟೆಗೆ ಬಂದೆ..ಕೆಲವು ರಾಜಕಾರಣಿಗಳು ಎಂಜಲು ಲೋಟ ತೊಳೆಯುವವರು ರಾಜಕಾರಣ ಮಾಡಲು ಆಗುತ್ತಾ ಎಂದು ಟೀಕೆಟಿಪ್ಪಣಿ ಮಾಡಿ ಮುಂಬೈ ಕನ್ನಡಿಗರಿಗೆ ಅಪಮಾನ ಮಾಡಿದ್ದರಿಂದ ಅನಿವಾರ್ಯವಾಗಿ ರಾಜಕಾರಣಕ್ಕೆ ಬರಬೇಕಾಯಿತು..

ಕೃಷ್ಣರಾಜಪೇಟೆ ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿ ಸತತವಾಗಿ ಮೂರು ಬಾರಿ ಗೆಲ್ಲಿಸಿ ಆಶೀರ್ವದಿಸಿರುವ ಕ್ಷೇತ್ರದ ಜನತೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ..ನನ್ನ ಜೀವದ ಕೊನೆಯ ಉಸಿರಿನವರೆಗೂ ತಾಲ್ಲೂಕಿನ ಜನತೆಯ ಸೇವೆಯನ್ನು ಒಬ್ಬ ಸೇವಕನಂತೆ ಮಾಡುತ್ತೇನೆ. ನಾನು ಸತ್ತ ನಂತರ ಮಣ್ಣಲ್ಲಿ ಮಣ್ಣಾಗುವುದೂ ಇಲ್ಲಿಯೇ ನಾರಾಯಣಗೌಡ ಮುಂಬೈಗೆ ಹೋಗ್ತಾನೆ ಅನ್ನುವವರನ್ನು ಗೌರವಯುತವಾಗಿ ಮುಂಬೈಗೆ ಬಿಟ್ಟು ಬರ್ತೇನೆ..ಏಕೆಂದರೆ ಮುಂಬೈ ಮಹಾನಗರಕ್ಕೆ ಹೋಗಿ ಬರುವ ದಾರಿಗಳು ನನಗೆ ಚೆನ್ನಾಗಿ ಗೊತ್ತಿದೆ ಎಂದು ಸಚಿವ ನಾರಾಯಣಗೌಡ ವ್ಯಂಗ್ಯವಾಡಿದರು..

ಕೆ.ಆರ್.ಪೇಟೆ ತಾಲ್ಲೂಕಿನ ಅಭಿವೃದ್ಧಿಗೆ ಹಾಗೂ ಕೆರೆಕಟ್ಟೆಗಳನ್ನು ತುಂಬಿಸಲು ಕೊರೋನಾ ಸಂಕಷ್ಠದ ನಡುವೆಯೂ ಒಂದು ಸಾವಿರ ಕೋಟಿರೂ ಅನುದಾನವನ್ನು ತಂದಿದ್ದೇನೆ. ನನ್ನ ವಿರುದ್ಧ ಟೀಕೆ ಮಾಡುವ ಟೀಕಾಕಾರರಿಗೆ ಅಭಿವೃದ್ಧಿ ಕೆಲಸಗಳ ಮೂಲಕ ಉತ್ತರ ನೀಡುತ್ತೇನೆ ಎಂದು ಸಚಿವರು ಗುಡುಗಿದರು.

ಬರಪೀಡಿತ ಸಂತೇಬಾಚಹಳ್ಳಿ ಹೋಬಳಿಯ ೫೦ಕ್ಕೂ ಹೆಚ್ಚಿನ ಕೆರೆಕಟ್ಟೆಗಳನ್ನು ತುಂಬಿಸಲು ಮುಖ್ಯಮಂತ್ರಿಗಳು ೨೧೨ಕೋಟಿ ರೂಪಾಯಿ ವೆಚ್ಚದಲ್ಲಿ ಗೂಡೆಹೊಸಳ್ಳಿ ಏತನೀರಾವರಿ ಯೋಜನೆಯನ್ನು ಮಂಜೂರು ಮಾಡಿಸಿ ಹಣಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ..ಈಗಾಗಲೇ ಹೇಮಾವತಿ ನದಿಯಿಂದ ೪ಕಿ.ಮೀ ಉದ್ದಕ್ಕೆ ಅಳವಡಿಸಲು ಪೈಪುಗಳು ಬರುತ್ತಿವೆ ಎಂದು ಸಚಿವರು ಹೇಳಿದರು…

ಈ ಸಂದರ್ಭದಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮಾಜಿಸದಸ್ಯ ಅಘಲಯಮಂಜುನಾಥ್, ತಾ.ಪಂ ಮಾಜಿಸದಸ್ಯ ಬಿಲ್ಲೇನಹಳ್ಳಿ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಓಬಿಸಿ ಘಟಕದ ತಾಲೂಕು ಅಧ್ಯಕ್ಷ ಸಾರಂಗಿನಾಗರಾಜು, ರೈತಮೋರ್ಚಾ ತಾಲೂಕು ಅಧ್ಯಕ್ಷ ಶಿವರಾಮೇಗೌಡ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಕುಮಾರ್, ಪ್ರಥಮದರ್ಜೆ ಗುತ್ತಿಗೆದಾರ ಕಾಂತರಾಜು, ಬಿಜೆಪಿ ಮುಖಂಡರಾದ ಸೋಮಶೇಖರ್, ಮರೀಗೌಡ, ಶ್ರೀಧರ್, ಕುಂದೂರು ಜಗಧೀಶ್, ಮೊಟ್ಟೆಮಂಜು, ಕೃಷ್ಣೇಗೌಡ, ಭಾರತಿಪುರ ಮಂಜುನಾಥ್ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು… ಗ್ರಾಮಕ್ಕೆ ಆಗಮಿಸಿದ ಸಚಿವರು ಹಾಗೂ ಅತಿಥಿಗಳನ್ನು ನಾದಸ್ವರ ವಾಧ್ಯಗಳೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ ಭಾರಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು…

ನಮಗೆ ಕುಡಿಯಲು ನೀರು ಕೊಟ್ಟ ಪುಣ್ಯಾತ್ಮ ನೀನು ಕಣಪ್ಪಾ ದ್ಯಾವ್ರು ನಿನ್ನ ಚಂದಾಗಿ ಮಡಗಿರಲಿ ಎಂದು ಗ್ರಾಮದ ಮಹಿಳೆಯರು ಆಶೀರ್ವದಿಸುತ್ತಿದ್ದುದು ಕಂಡು ಬಂತು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: