May 13, 2024

Bhavana Tv

Its Your Channel

ಜಾನಪದ ಗಾಯಕಿ ಸೋಬಾನೆ ಸಾಕಮ್ಮ ಅವರಿಗೆ ೨೦೧೯-೨೦ನೇ ಸಾಲಿನ ಜಾನಪದ ಜನ್ನೆ ಪ್ರಶಸ್ತಿ ಪ್ರಧಾನ

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಬೋಳಮಾರನಹಳ್ಳಿ ಗ್ರಾಮದಲ್ಲಿ ಜಾನಪದ ಗಾಯಕಿ, ಗಾಯನ ಸರಸ್ವತಿ, ಸೋಬಾನೆ ಸಾಕಮ್ಮ ಅವರಿಗೆ ಮಂಡ್ಯದ ಜಾನಪದ ಜನ್ನೆಯರು ಜನಪದ ಸಂಸ್ಥೆಯು ೨೦೧೯-೨೦ನೇ ಸಾಲಿನ ಜಾನಪದ ಜನ್ನೆ ಪ್ರಶಸ್ತಿ ಪ್ರಧಾನ ಮಾಡಿ ಗ್ರಾಮಸ್ಥರ ಮಧ್ಯದಲ್ಲಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಿತು. ಕೆ.ಆರ್.ಪೇಟೆ ತಾಲೂಕು ಕರ್ನಾಟಕ ಜಾನಪದ ಪರಿಷತ್ ಘಟಕದ ಅಧ್ಯಕ್ಷ ಕೆ.ಎಸ್.ಸೋಮಶೇಖರ್ ಭತ್ತವನ್ನು ಒನಕೆಯಲ್ಲಿ ಕುಟ್ಟುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜಾನಪದ ನಮ್ಮ ಜೀವನದ ಕ್ರಮವಾಗಿದೆ. ನಮ್ಮ ಬದುಕನ್ನು ಉತ್ತಮಪಡಿಸುವ, ನಮ್ಮ ನೋವು ನಲಿವುಗಳಿಗೆ ವೇದಿಕೆಯಾಗಿರುವ ಜನಪದ ಹಾಡುಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಿವೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ವೈಭವವನ್ನು ಅನಾವರಣ ಮಾಡುವ ಜನಪದ ಕಲೆಗಳು ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಜೀವಂತವಾಗಿ ಉಳಿದಿವೆ .. ಮೌಢ್ಯವಿಲ್ಲದ, ನಮ್ಮ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಕಾಯಕಕ್ಕೆ ನಾಗರಿಕ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಸೋಮಶೇಖರ್ ಮನವಿ ಮಾಡಿದರು ..

ಜಾನಪದ ಹಾಡುಗಳ ಕಣಜ, ಗಾನ ಸರಸ್ವತಿ ಸಾಕಮ್ಮ ಅವರಿಗೆ ಶಾಲು ಹೊದಿಸಿ ಮೈಸೂರು ಪೇಟವನ್ನು ತೊಡಿಸಿ, ರವಿಕೆ ಮತ್ತು ಸೀರೆಯ ಕಣ ಹಾಗೂ ಐದು ಸಾವಿರ ರೂ ಚೆಕ್ಕನ್ನು ನೀಡಿ ಸನ್ಮಾನಿಸಿ ಗೌರವಿಸಿದ ಕವಿಯತ್ರಿ ಸವಿತಾರಮೇಶ್ ಮಾತನಾಡಿ ತಮ್ಮ ೮೮ನೇ ಇಳಿ ವಯಸ್ಸಿನಲ್ಲಿಯೂ ಸದಾ ಲವಲವಿಕೆಯಿಂದ ಜನಪದ ಹಾಡುಗಳನ್ನು ಹಾಡುತ್ತಾ ರಂಜಿಸುತ್ತಿರುವ ಸಾಕಮ್ಮ ಅವರ ಬಳಿ ಜನಪದ ಹಾಡುಗಳ ಭಂಡಾರವಿದೆ. ಸಾಕಮ್ಮ ಅವರ ಜ್ಞಾನ ಭಂಡಾರ, ಅನುಭವ ಹಾಗೂ ಹಿರಿತನಕ್ಕೆ ರಾಜ್ಯ ಸರ್ಕಾರವು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕಾಗಿತ್ತು. ಆದರೆ ಸಾಕಮ್ಮ ಅವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದೆ. ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಸಚಿವರಾದ ಡಾ.ನಾರಾಯಣಗೌಡರು ಜಾನಪದ ಕಲಾ ಸರಸ್ವತಿ ಸಾಕಮ್ಮ ಅವರಿಗೆ ೨೦೨೧ರ ನವೆಂಬರ್ ೧ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿಸಿ ಹಿರಿಯ ಜೀವವನ್ನು ಗೌರವಿಸುವ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಸವಿತಾ ಮನವಿ ಮಾಡಿದರು …

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡ್ಯದ ಜಾನಪದ ಜನ್ನೆಯರು ಸಂಸ್ಥೆಯ ಅಧ್ಯಕ್ಷೆ ಡಾ.ಸುಜಾತ ಅಕ್ಕಿ ಮಾತನಾಡಿ ಕೊರೋನಾ ಸಂಕಷ್ಠದ ಹಿನ್ನೆಲೆಯಲ್ಲಿ ೨೦೧೯-೨೦ನೇ ಸಾಲಿನ ನಮ್ಮ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಅತ್ಯಂತ ಸರಳವಾಗಿ ಆಚರಿಸಿ ಸಾಕಮ್ಮ ಅವರ ಗ್ರಾಮಕ್ಕೆ ಆಗಮಿಸಿ ಸರಳ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದ್ದೇವೆ. ಸಾಕಮ್ಮ ಅವರ ಬಳಿ ಇರುವ ಜನಪದ ಹಾಡುಗಳು, ಸೋಬಾನೆ ಪದಗಳನ್ನು ಯುವಜನರಿಗೆ ವಾರದಲ್ಲಿ ಎರಡು ದಿನಗಳ ಕಾಲ ಕಲಿಸುವ ಕಾಯಕವನ್ನು ಸ್ಥಳೀಯ ಸಂಘಸAಸ್ಥೆಗಳು ಮಾಡಿ ಸಾಕಮ್ಮ ಅವರ ಜ್ಞಾನಭಂಡಾರದಲ್ಲಿರುವ ಸಾವಿರಾರು ಹಾಡುಗಳನ್ನು ಜೋಪಾನ ಮಾಡಿ ನಮ್ಮ ಮುಂದಿನ ತಲೆಮಾರಿಗೆ ಉಳಿಸುವ ಕೆಲಸವನ್ನು ಮಾಡಬೇಕು. ಸಾಕಮ್ಮ ಅವರಿಂದಾಗಿ ಬೋಳಮಾರನಹಳ್ಳಿ ಗ್ರಾಮಕ್ಕೆ ಹೆಮ್ಮೆ ಮತ್ತು ಕೀರ್ತಿ ಸಂದಿದೆ. ಯುವಜನರಲ್ಲಿ ಜೀವನೋತ್ಸಾಹವನ್ನು ತುಂಬುವ, ನಮ್ಮ ದೇಸಿ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಜಾನಪದ ಹಾಡುಗಳು ವರದಾನವಾಗಿವೆ. ಜಾನಪದ ನಮ್ಮ ನೈಜ ಬದುಕಿನ ಗ್ರಾಮೀಣ ಸೊಗಡಿನ ಪ್ರತಿಬಿಂಬವಾಗಿದೆ ಎಂದು ಸುಜಾತ ಅಕ್ಕಿ ಹೇಳಿದರು …

ಬೋಳಮಾರನಹಳ್ಳಿ ಗ್ರಾಮದ ಹಿರಿಯ ಮುಖಂಡ ಅಣ್ಣಾಸ್ವಾಮಿ ಸೋಬಾನೆ ಸಾಕಮ್ಮ ಅವರನ್ನು ಅಭಿನಂದಿಸಿ ಮಾತನಾಡಿದರು. ಜಾನಪದ ಜನ್ನೆಯರು ಹಾಡಿದ ರಾಗಿಬೀಸುವ ಪದ, ಸೋಬಾನೆ ಪದ, ಸ್ವಾಗತ ಗೀತೆ ಮತ್ತು ಜಾನಪದ ಹಾಡುಗಳು ಗ್ರಾಮಸ್ಥರನ್ನು ರಂಜಿಸಿದವು… ಬೋಳಮಾರನಹಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ನೆಲೆಸಿ ಸಡಗರ ಸಂಭ್ರಮವು ಗ್ರಾಮಸ್ಥರ ಮನೆ ಹಾಗೂ ಮನಗಳಲ್ಲಿ ರಾರಾಜಿಸುತ್ತಿತ್ತು..ಸೋಬಾನೆ ಸಾಕಮ್ಮ ಅವರು ಜಾನಪದ ಹಾಡುಗಳನ್ನು ಹಾಡಿ ಅತಿಥಿಗಳು ಹಾಗೂ ಗ್ರಾಮಸ್ಥರನ್ನು ರಂಜಿಸಿತು…

ಈ ಸಂದರ್ಭದಲ್ಲಿ ಜಾನಪದ ಜನ್ನೆಯರು ಸಂಸ್ಥೆಯ ಉಪಾಧ್ಯಕ್ಷೆ ಡಾ.ಮಂಗಳಾ, ಕಾರ್ಯದರ್ಶಿ ಡಾ.ಎಂ.ಕೆAಪಮ್ಮ, ಖಜಾಂಚಿ ಡಾ.ಛಾಯಾ, ಸಂಚಾಲಕಿ ರಾಣಿ ಚಂದ್ರಶೇಖರ್, ನಿರ್ದೇಶಕರಾದ ಜಿ.ಉಷಾರಾಣಿ, ಡಾ.ತೇಜಸ್ವಿನಿ, ಡಾ.ರಮ್ಯ, ಡಾ.ದೇವಿಕಾ, ಶಿಲ್ಪಕೃಷ್ಣೇಗೌಡ, ಎ.ಸಿ.ಮಾನಸ, ಡಾ.ದಿವ್ಯಾ, ಕೆ.ಆರ್.ಪೇಟೆ ತಾಲೂಕು ಕಸಾಪ ಮಾಜಿಅಧ್ಯಕ್ಷ ಡಾ.ಕೆ.ಆರ್.ನೀಲಕಂಠ ಮತ್ತು ನೂರಾರು ಗ್ರಾಮಸ್ಥರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದರು..

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: