May 12, 2024

Bhavana Tv

Its Your Channel

ನೀರು ಅಮೂಲ್ಯವಾದದ್ದು ನೀರನ್ನು ಹಿತವಾಗಿ ಮಿತವಾಗಿ ಬಳಸಿಕೊಂಡು ಬೇಸಾಯ ಮಾಡಬೇಕು. ಅನಗತ್ಯವಾಗಿ ನೀರನ್ನು ಪೋಲು ಮಾಡಬಾರದು – ಆರ್.ಎ.ನಾಗಣ್ಣ

ಮಂಡ್ಯ: ನೀರು ಅಮೂಲ್ಯವಾದದ್ದು ನೀರನ್ನು ಹಿತವಾಗಿ ಮಿತವಾಗಿ ಬಳಸಿಕೊಂಡು ಬೇಸಾಯ ಮಾಡಬೇಕು. ಅನಗತ್ಯವಾಗಿ ನೀರನ್ನು ಪೋಲು ಮಾಡಬಾರದು ಎಂದು ಹೇಮಾವತಿ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ಆರ್.ಎ.ನಾಗಣ್ಣ ಮನವಿ ಮಾಡಿದರು.

ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದ ಹೇಮಾವತಿ ಜಲಾಶಯ ಯೋಜನೆಯ ನಂ.೩ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಾರ್ಯಾಲಯದ ಆವರಣದಲ್ಲಿ ನಡೆದ ಮಹಾಮಂಡಲದ ೨೦೧೯-೨೦ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೇಮಾವತಿ ಜಲಾಶಯ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ತುಮಕೂರು, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳ ವ್ಯಾಪ್ತಿಯ ೨೩೦ ನೀರು ಬಳಕೆದಾರರ ಸಂಘಗಳು ಮಹಾಮಂಡಲದ ವ್ಯಾಪ್ತಿಗೆ ಬರುತ್ತವೆ. ಸಂಘಗಳ ಪುನಶ್ಚೇತನ ಹಾಗೂ ಕಾರ್ಯಕ್ರಮಗಳನ್ನು ರೂಪಿಸಲು ರಾಜ್ಯ ಸರ್ಕಾರವು ಕಾಡಾ ಅಚ್ಚುಕಟ್ಟು ಪ್ರಾಧಿಕಾರದ ಮೂಲಕ ತಲಾ ಒಂದು ಲಕ್ಷರೂ ಅನುದಾನ ನೀಡಿದೆ. ಈ ಹಣವನ್ನು ಸದ್ಬಳಕೆ ಮಾಡಿಕೊಂಡಿರುವ ಸಂಘಗಳು ಹಣ ಬಳಕೆಯ ದಾಖಲೆಗಳು ಹಾಗೂ ಪೋಟೋಗಳನ್ನು ನೀಡಿ ಮತ್ತೆ ಒಂದು ಲಕ್ಷರೂ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ವಿವರಿಸಿದ ನಾಗಣ್ಣ ನೀರು ಬಳಕೆದಾರರ ಸಹಕಾರ ಸಂಘಗಳು ರೈತಬಾಂಧವರಲ್ಲಿ ನೀರಿನ ಸದ್ಬಳಕೆಯ ಬಗ್ಗೆ ಜಾಗೃತಿಯನ್ನು ಮೂಡಿಸದಿದ್ದರೆ ಮುಂದಿನ ದಿನಗಳಲ್ಲಿ ಬೇಸಾಯಕ್ಕೆ ನೀರಿನ ಅಭಾವವನ್ನು ಎದುರಿಸಬೇಕಾಗುತ್ತದೆ. ಪ್ರಸ್ತುತ ಗೊರೂರು ಜಲಾಶಯದಲ್ಲಿರುವ ನೀರಿನಲ್ಲಿ ೧೦ಟಿ.ಎಂ.ಸಿ ನೀರನ್ನು ಕುಡಿಯುವ ನೀರಿಗೆ ಹಾಗೂ ೫ಟಿಎಂಸಿ ನೀರನ್ನು ಜಲಾಶಯದ ಸಂಗ್ರಹಣೆಗೆ ಇಟ್ಟುಕೊಂಡು ಉಳಿದ ನೀರನ್ನಷ್ಟೇ ಬೇಸಾಯಕ್ಕೆ ಬಳಸುವ ಅವಕಾಶವಿರುವುದರಿಂದ ಜಲಾಶಯದ ನಿಯಮದಂತೆ ಅರೆ ನೀರಾವರಿ ಬೆಳೆಗಳ ಬೇಸಾಯದತ್ತ ಮುಖ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ನಾಗಣ್ಣ ಹೇಳಿದರು.

ಮಹಾಮಂಡಲದ ಉಪಾಧ್ಯಕ್ಷ ಹೆಚ್.ಎನ್.ಲವಣ್ಣ. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಹೇಮಾವತಿ ಜಲಾಶಯ ಯೋಜನೆಯ ನೀರಿನ ಸದ್ಬಳಕೆಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಪಾತ್ರವು ನಿರ್ಣಾಯಕವಾಗಿದೆ. ನಾಲೆಯ ನೀರು ನಾಲೆಯ ಕೊನೆಯ ಭಾಗದವರೆಗೂ ರೈತರ ಜಮೀನಿಗೆ ಹರಿಧು ರೈತ ನೆಮ್ಮದಿಯಿಂದ ಬೇಸಾಯ ಮಾಡಿದಾಗ ಮಾತ್ರ ನಮ್ಮ ಸಹಕಾರ ವ್ಯವಸ್ಥೆಯ ಸಂಘಕ್ಕೆ ಶಕ್ತಿ ಬರುತ್ತದೆ. ಆದ್ದರಿಂದ ನೀರು ಬಳಕೆದಾರರ ಸಂಘಗಳು ಪುನಶ್ಚೇತನಗೊಂಡು ಮಹಾಮಂಡಲದ ಸದಸ್ಯತ್ವ ಪಡೆದು ಕ್ರಿಯಾಶೀಲವಾಗಿ ರೈತಪರವಾಗಿ ಕೆಲಸ ಮಾಡಬೇಕು ಎಂದು ಲವಣ್ಣ ಹೇಳಿದರು .

ಹೇಮಾವತಿ ಜಲಾಶಯ ಯೋಜನೆಯ ಚನ್ನರಾಯಪಟ್ಟಣ ವಿಭಾಗದ ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ರೈತರೊಂದಿಗೆ ಸಂವಾದ ನಡೆಸಿ ರೈತರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನು ದೊರಕಿಸಿಕೊಟ್ಟರು.

ಕಾಡಾದ ತುಮಕೂರಿನ ಭೂ ಅಭಿವೃದ್ಧಿ ಅಧಿಕಾರಿ ಮಾರುತಿ, ಕಾಡಾದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನಕುಮಾರ್, ಮಹಾಮಂಡಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಜೆ.ಕುಮಾರ್ ಮಾತನಾಡಿದರು..
ಈ ಸಂದರ್ಭದಲ್ಲಿ ಮಹಾಮಂಡಲದ ನಿರ್ದೇಶಕರಾದ ಹೆಚ್.ರಾಜಶೇಖರ, ಮರೀಗೌಡ, ಸಿದ್ಧೇಗೌಡ, ಪ್ರಕಾಶ್, ಬಿ.ಬಿ.ಮಹೇಶ್, ಗಂಗಾಧರ, ಮಲ್ಲೇಗೌಡ, ಮಾರ್ಕಂಡೇಯ, ಯೋಗೇಂದ್ರ, ಭೈರೇಗೌಡ, ಡಿ.ಕೆ.ಮಾದೇಗೌಡ, ಸಹಕಾರ್ಯದರ್ಶಿ ಕೆ.ಎನ್.ಲಕ್ಷ್ಮೀಶ ಮತ್ತಿತರರು ಉಪಸ್ಥಿತರಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: