April 29, 2024

Bhavana Tv

Its Your Channel

ಶ್ರೀ ಕ್ಷೇತ್ರ ಕಾಪನಹಳ್ಳಿ ಗವಿಮಠ ದರ್ಶನ ಕೃತಿ ಲೋಕಾರ್ಪಣೆ

ಶ್ರೀ ಕ್ಷೇತ್ರ ಕಾಪನಹಳ್ಳಿ ಗವಿಮಠ ದರ್ಶನ ಕೃತಿ ಲೋಕಾರ್ಪಣೆ..

ಯುವಜನರು ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಲು ಡಾ.ವಚನ ಕುಮಾರಸ್ವಾಮಿ ಮನವಿ ..

ಕೃಷ್ಣರಾಜಪೇಟೆ ತಾಲ್ಲೂಕಿನ ಶರಣ ಶ್ರದ್ಧಾ ಕೇಂದ್ರವಾದ ಕಾಪನಹಳ್ಳಿ ಗವಿಮಠದಲ್ಲಿರುವ ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಸಾಹಿತಿ ಮಾರೇನಹಳ್ಳಿ ಲೋಕೇಶ್ ವಿರಚಿತ ಶ್ರೀ ಕ್ಷೇತ್ರ ಕಾಪನಹಳ್ಳಿ ಗವಿಮಠ ದರ್ಶನ ಕೃತಿಯ ಲೋಕಾರ್ಪಣೆಯು ಅರ್ಥಪೂರ್ಣವಾಗಿ ನಡೆಯಿತು …

ವಿಶ್ವ ವಚನ ಸಾಹಿತ್ಯ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಡಾ.ವಚನಕುಮಾರಸ್ವಾಮಿ ಅವರು ಶ್ರೀ ಕ್ಷೇತ್ರ ಕಾಪನಹಳ್ಳಿ ಗವಿಮಠ ದರ್ಶನ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು…

ಎಡೆಯೂರು ಸಿದ್ಧಲಿಂಗೇಶ್ವರರ ಸಮಕಾಲೀನರಾದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರು ಪವಾಡ ನಡೆಸಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಇತಿಹಾಸ, ಸ್ವತಂತ್ರ ಸಿದ್ಧಲಿಂಗೇಶ್ವರ ಜೀವಂತವಾಗಿ ಐಕ್ಯವಾಗಿರುವ ಗದ್ದುಗೆಯ ಬಗ್ಗೆ ತಿಳಿಸಿಕೊಟ್ಟ ವಚನಕುಮಾರಸ್ವಾಮಿ ಈ ಭಾಗದ ಏಕೈಕ ಶರಣ ಶ್ರದ್ಧಾ ಕೇಂದ್ರವಾದ ಕಾಪನಹಳ್ಳಿ ಗವಿಮಠದ ನೆಲಕ್ಕೆ ಹಾಗೂ ಈ ಮಣ್ಣಿಗೆ ವಿಶೇಷವಾದ ಶಕ್ತಿಯಿದೆ. ಕಾಯಕಯೋಗಿ ಅಣ್ಣ ಬಸವಣ್ಣನವರ ಆದರ್ಶಗಳು ಹಾಗೂ ಸಿದ್ಧಾಂತಗಳನ್ನು ಪಾಲಿಸುತ್ತಾ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರರು ವಚನಗಳನ್ನು ರಚಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಇಂದಿನ ಯುವಜನರು ವಿಶೇಷವಾಗಿ ವಚನ ಸಾಹಿತ್ಯವನ್ನು ಅಭ್ಯಾಸ ಮಾಡಿ ವಚನಸಾಹಿತ್ಯದ ಸಾರ ಹಾಗೂ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದಲಾವಣೆಯ ದಿಕ್ಕಿನತ್ತ ಸಾಗಬೇಕು. ನಡೆದಂತೆ ನುಡಿಯಬೇಕು, ಸಾಮಾಜಿಕ ಅಸಮಾನತೆ ಹಾಗೂ ಮೌಢ್ಯಗಳ ನಿರ್ಮೂಲನೆಗೆ ಸಂಘಟಿತ ಹೋರಾಟ ನಡೆಸಬೇಕು ಎಂದು ಮನವಿ ಮಾಡಿದ ವಿಶ್ವ ವಚನ ಸಾಹಿತ್ಯ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಮೈಸೂರು ವಚನಕುಮಾರಸ್ವಾಮಿ ಅವರು ಸಾಹಿತಿಗಳಾದ ಮಾರೇನಹಳ್ಳಿ ಲೋಕೇಶ್ ಅವರು ಸತತವಾಗಿ ಅಭ್ಯಾಸ ಮಾಡಿ ಶ್ರೀ ಕ್ಷೇತ್ರ ಕಾಪನಹಳ್ಳಿ ಗವಿಮಠದ ಇತಿಹಾಸ, ಪರಂಪರೆ ಹಾಗೂ ಸ್ವತಂತ್ರ ಸಿದ್ಧಲಿಂಗೇಶ್ವರರ ಜೀವನದ ಸಾಧನೆಯನ್ನು ಮನಮುಟ್ಟುವಂತೆ ರಚಿಸಿದ್ದಾರೆ. ಸೃಜನಶೀಲತೆ ಹಾಗೂ ಬದ್ಧತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಸಾಹಿತಿ ಮಾರೇನಹಳ್ಳಿಲೋಕೇಶ್ ಅವರಿಂದ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೃತಿಗಳು ಹೊರಬರಲಿ, ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು…

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಪತ್ರಕರ್ತ ಬಳ್ಳೇಕೆರೆ ಮಂಜುನಾಥ್ ಮಾತನಾಡಿ ವಿದ್ಯಾರ್ಥಿಗಳು ವಿನಯವಂತಿಕೆ ಹಾಗೂ ಗುರುಹಿರಿಯರಲ್ಲಿ ಭಕ್ತಿಯನ್ನು ಬೆಳೆಸಿಕೊಂಡು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಗುರಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು..

ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಶ್ರೀ ಕ್ಷೇತ್ರ ಗವಿಮಠ ದರ್ಶನ ಕೃತಿಯನ್ನು ಕುರಿತು ಮಾತನಾಡಿ ತೋಂಟದ ಸಿದ್ಧಲಿಂಗೇಶ್ವರರ ಸಹಪಾಠಿಗಳಾದ ಸ್ವತಂತ್ರ ಸಿದ್ಧಲಿಂಗೇಶ್ವರರು ಈ ಭಾಗದಲ್ಲಿ ಪವಾಡಗಳನ್ನು ಮಾಡುವ ಜೊತೆಗೆ ವಚನಗಳನ್ನು ರಚಿಸಿ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸಿ ವಚನಕ್ರಾಂತಿ ಮಾಡಿದ್ದಾರೆ. ಗವಿಮಠದ ಸಮಗ್ರವಾದ ಇತಿಹಾಸವನ್ನು ಒಳಗೊಂಡಿರುವ ಕೃತಿಯನ್ನು ರಚಿಸಿ ಶ್ರೀ ಕ್ಷೇತ್ರದ ಪರಿಚಯವು ನಾಡಿನ ಜನರಿಗೆ ಹಾಗೂ ಯುವಜನರಿಗೆ ತಿಳಿಯುವಂತೆ ಮಾಡಿದ್ದಾರೆ ಎಂದು ಅಭಿನಂದಿಸಿ ಲೋಕೇಶ್ ಅವರ ಸಾಹಿತ್ಯ ಕೃಷಿಯ ಬಗ್ಗೆ ಗುಣಗಾನ ಮಾಡಿದರು..

ಶ್ರೀ ಕ್ಷೇತ್ರ ಕಾಪನಹಳ್ಳಿ ಗವಿಮಠದ ಪೀಠಾಧಿಪತಿಗಳಾದ ಶ್ರೀ ಚನ್ನವೀರಯ್ಯಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಕಾಪನಹಳ್ಳಿ ಗವಿಮಠದ ಇತಿಹಾಸವು ನಾಡಿನ ಜನರಿಗೆ ಹಾಗೂ ಸದ್ಬಕ್ತರಿಗೆ ತಿಳಿಯುವಂತೆ ಮಾಡಿದ ಲೋಕೇಶ್ ಅವರಿಗೆ ಶುಭ ಹಾರೈಸಿದರು…

ಮೊರಾರ್ಜಿ ದೇಸಾಯಿ ವಸತಿಶಾಲೆಯ ಪ್ರಾಂಶುಪಾಲರಾದ ಪ್ರಸನ್ನಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀ ಕ್ಷೇತ್ರ ಕಾಪನಹಳ್ಳಿ ಗವಿಮಠ ದರ್ಶನ ಕೃತಿಯನ್ನು ತಮ್ಮ ಶಾಲೆಯಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಕೆ.ಆರ್.ನೀಲಕಂಠ, ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಿಂದಘಟ್ಟ ನಾಗೇಶ್, ವಚನ ಪರಿಷತ್ತಿನ ಪದಾಧಿಕಾರಿಗಳಾದ ನಿಂಗಪ್ಪ, ಚನ್ನಬಸಪ್ಪ, ಶಿಕ್ಷಕರಾದ ರವಿ, ಹೇಮಚಂದ್ರ, ರೇಣುಕಾಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: