May 13, 2024

Bhavana Tv

Its Your Channel

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ

ಕೆ.ಆರ್.ಪೇಟೆ:– ರಾಷ್ಟ್ರದ ಮುನ್ನಡೆಯಲ್ಲಿ ಹೆಣ್ಣು ಮಕ್ಕಳು ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡುತ್ತಾ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಸಂಸಾರ ಹಾಗೂ ಕುಟುಂಬದ ಮುನ್ನಡೆಗೆ ಹೆಣ್ಣು ಮಕ್ಕಳ ಕೊಡುಗೆ ಅಪಾರವಾಗಿದೆ ಎಂದು ಪಟ್ಟಣದ ಸಿವಿಲ್ ನ್ಯಾಯಾಲಯದ ಹಿರಿಯಶ್ರೇಣಿ ನ್ಯಾಯಾಧೀಶರಾದ ಸಮೀರ್ ಪಿ.ನಂಧ್ಯಾಲ್ ಹೇಳಿದರು ..

ಅವರು ಇಂದು ಕೆ.ಆರ್.ಪೇಟೆ ಪುರಸಭೆ ವ್ಯಾಪ್ತಿಯ ಹೊಸಹೊಳಲಿನಲ್ಲಿರುವ ಶ್ರೀ ಕೋಟೆ ಭೈರವೇಶ್ವರ ಸಮುದಾಯ ಭವನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು….

ಹೆಣ್ಣು ಮಕ್ಕಳು ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡುತ್ತಾ ದೇಶದ ಮುನ್ನಡೆಗೆ ಅಪಾರವಾದ ಕೊಡುಗೆಯನ್ನು ನೀಡುತ್ತಿದ್ದಾರೆ. ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಮಗಳಾಗಿ ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ದಬ್ಬಾಳಿಕೆ ದೌರ್ಜನ್ಯವು ನಡೆಯುತ್ತಿದೆ. ಹೆಣ್ಣು ಮಕ್ಕಳು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿಹಾಕಿ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ದೌರ್ಜನ್ಯವನ್ನು ಎದುರಿಸಿ ಮುನ್ನಡೆಯಬೇಕು ಎಂದು ನ್ಯಾಯಾಧೀಶರಾದ ಸಮೀರ್ ಪಿ.ನಂಧ್ಯಾಲ್ ಕರೆ ನೀಡಿದರು..

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಂ.ವಿ.ರೂಪ ಮಾತನಾಡಿ ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ಕಾಡುತ್ತಿರುವುದನ್ನು ನೋಡುತ್ತಿದ್ದೇವೆ. ಮಹಿಳೆಯರು ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಸಾಮಾಜಿಕ ಅಸಮಾನತೆಗಳು, ಕಟ್ಟುಪಾಡುಗಳು ಹಾಗೂ ಮೂಡನಂಬಿಕೆಯ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. ನಾಗರಿಕ ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣು ಭ್ರೂಣಹತ್ಯೆಯಂತಹ ಅಮಾನುಷ ಕೆಲಸದ ವಿರುದ್ಧ ಗಟ್ಟಿಧ್ವನಿಯಲ್ಲಿ ಹೋರಾಟ ನಡೆಸಬೇಕು. ಹೆಣ್ಣು ಮಕ್ಕಳು ವೃತ್ತಿಕೌಶಲ್ಯ ಹಾಗೂ ಉಪಕಸುಬುಗಳ ಮೂಲಕ ಆರ್ಥಿಕ ಸಬಲೀಕರಣ ಸಾಧಿಸಿ ಮುನ್ನಡೆಯಬೇಕು ಎಂದು ರೂಪ ಕರೆ ನೀಡಿದರು.

ಅಪರ ಸಿವಿಲ್ ನ್ಯಾಯಾಧೀಶರಾದ ಬಸವರಾಜ್ ತುಳಸಪ್ಪನಾಯಕ, ವಕೀಲರ ಸಂಘದ ಅಧ್ಯಕ್ಷರಾದ ಎಂ.ಆರ್.ಪ್ರಸನ್ನಕುಮಾರ್, ಮಾಜಿಅಧ್ಯಕ್ಷರಾದ ಜಿ.ಆರ್.ವೆಂಕಟರಾಮಯ್ಯ, ಸಿಡಿಪಿಓ ಪದ್ಮ, ಪ್ರೊಬೆಷನರಿ ಎಸ್.ಐ ಶೋಭಾ, ವಕೀಲರಾದ ಎಸ್.ಡಿ.ಸರೋಜಮ್ಮ, ಹೆಚ್.ವಿ.ಆಶಾರಾಜೇಗೌಡ, ಸಿಡಿಪಿಓ ಕಛೇರಿಯ ಮೇಲ್ವಿಚಾರಕರಾದ ಶಾಂತವ್ವ, ಮಂಜುಳಾ, ಯಶೋಧಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಧುಸೂದನ್, ವಕೀಲರ ಸಂಘದ ಪದಾಧಿಕಾರಿಗಳಾದ ಡಿ.ಆರ್.ಮೋಹನ್, ಯೋಗೇಶ್, ಪುರಸಭೆಯ ಮುಖ್ಯಾಧಿಕಾರಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾಮಾಜಿಕ ಕಟ್ಟುಪಾಡುಗಳು, ವರದಕ್ಷಿಣೆ ಪದ್ದತಿ, ಬಾಲ್ಯವಿವಾಹ ದಂತಹ ಸಾಮಾಜಿಕ ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಹೋರಾಡುವುದಾಗಿ ಮಹಿಳೆಯರು ಪ್ರಮಾಣ ಸ್ವೀಕರಿಸಿದರು..ಸಿಡಿಪಿಓ ಪದ್ಮಾ ಪ್ರಮಾಣ ವಚನ ಬೋಧಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: