April 28, 2024

Bhavana Tv

Its Your Channel

ಸಚಿವ ನಾರಾಯಣಗೌಡ ರವರು ಮೇಲೆ ಜೆಡಿಎಸ್ ಮುಖಂಡರ ಇಲ್ಲಸಲ್ಲದ ಸುಳ್ಳು ಆರೋಪ ,ಬಿಜೆಪಿ ಮುಖಂಡರಿoದ ಪತ್ರಿಕಾಗೋಷ್ಠಿ

ಕೆ.ಆರ್.ಪೇಟೆ :– ಸಚಿವ ನಾರಾಯಣಗೌಡ ಅವರು ಕೃಷ್ಣರಾಜಪೇಟೆ ತಾಲ್ಲೂಕನ್ನು ಜಿಲ್ಲೆಯಲ್ಲಿಯೇ ಮಾದರಿ ತಾಲ್ಲೂಕನ್ನಾಗಿ ಅಭಿವೃದ್ಧಿಪಡಿಸಲು ಸಂಕಲ್ಪ ಮಾಡಿ ದುಡಿಯುತ್ತಿರುವುದನ್ನು ಸಹಿಸದ ಜೆಡಿಎಸ್ ಮುಖಂಡರು ಸಚಿವರ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಜೆಡಿಎಸ್ ಮುಖಂಡರುಗಳಿಗೆ ಕೆ.ಆರ್.ಪೇಟೆ ತಾಲ್ಲೂಕಿನ ಅಭಿವೃದ್ಧಿಯ ಬಗ್ಗೆ ನೈಜವಾದ ಕಾಳಜಿಯಿದ್ದರೆ ಅಪಪ್ರಚಾರ ನಡೆಸುವುದನ್ನು ಬಿಟ್ಟು ದಾಖಲೆಗಳ ಸಮೇತ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಬಿಜೆಪಿ ಮುಖಂಡರಾದ ಕೆ.ಶ್ರೀನಿವಾಸ್, ಶಿರಬಿಲ್ಲೇನಹಳ್ಳಿ ಮಂಜೇಗೌಡ, ಕಾರಿಗನಹಳ್ಳಿ ಕುಮಾರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಪುರಸಭೆಯ ಸದಸ್ಯರಾದ ಪ್ರಮೋದ್ ಮತ್ತು ವಿನೋದ್ ಸವಾಲು ಹಾಕಿದ್ದಾರೆ ..

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು..

ಕೆ.ಆರ್.ಪೇಟೆ ತಾಲ್ಲೂಕಿನ ಸಮಗ್ರವಾದ ಅಭಿವೃದ್ಧಿಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷವನ್ನು ಸೇರಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸತತವಾಗಿ ಮೂರು ಅವಧಿಗೆ ಶಾಸಕರಾಗಿ ಆಯ್ಕೆಯಾಗಿ ಇತಿಹಾಸವನ್ನು ನಿರ್ಮಿಸಿರುವ ನಾರಾಯಣಗೌಡ ಅವರು ತಾಲ್ಲೂಕಿನ ಜನತೆಯ ವಿಶ್ವಾಸವನ್ನು ಗಳಿಸಿ ಪ್ರಬುದ್ಧ ಮತದಾರರ ಪ್ರೀತಿ ವಿಶ್ವಾಸದಿಂದ ತಾಲ್ಲೂಕಿನ ಸಮಗ್ರವಾದ ಅಭಿವೃದ್ಧಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡು ದುಡಿಯುತ್ತಿರುವುದನ್ನು ಸಹಿಸದ ಜೆಡಿಎಸ್ ಮುಖಂಡರಾದ ಬಿ.ಎಲ್.ದೇವರಾಜು, ಹೆಚ್.ಟಿ.ಮಂಜು, ಜಾನಕೀರಾಮ್ ಮತ್ತು ಬೇಲದಕೆರೆ ನಂಜೇಗೌಡ ಅವರು ಸಚಿವರ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಜನತೆಯ ದಿಕ್ಕುತಪ್ಪಿಸುತ್ತಿದ್ದಾರೆ. ಸಚಿವರನ್ನು ಕಸದ ಮೇಲೆ ಕುಳಿತ ನೊಣಕ್ಕೆ ಹೋಲಿಸಿ ಮಾತನಾಡಿರುವ ಜೆಡಿಎಸ್ ಮುಖಂಡರು ಜನಸಾಮಾನ್ಯರ ರಕ್ತಹೀರುವ ಸೊಳ್ಳೆ, ತಿಗಣೆಗಳೆಂದು ತಿಳಿದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸೋಲಿನ ಕಹಿ ಉಣಿಸಿದ್ದಾರೆ. ಕಾಮಾಲೆ ಕಣ್ಣಿಗೆ ಲೋಕವೆಲ್ಲಾ ಕಾಣುವುದು ಹಳದಿ ಬಣ್ಣದಲ್ಲಿ ಎನ್ನುವಂತೆ ಜೆಡಿಎಸ್ ಮುಖಂಡರು ಕೆ.ಆರ್.ಪೇಟೆ ತಾಲ್ಲೂಕಿನ ಅಭಿವೃದ್ಧಿಗಾಗಿ ದುಡಿಯುತ್ತಿರುವ ಸಚಿವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಜನತೆಯ ದಿಕ್ಕುತಪ್ಪಿಸಲು ಕುತಂತ್ರ ನಡೆಸಿ ಸಚಿವರನ್ನು ಟೀಕಿಸಿದರೆ ನಾವು ದೊಡ್ಡವರಾಗುತ್ತೇವೆ ಎಂಬAತೆ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಶ್ರೀನಿವಾಸ್ ಸಚಿವ ನಾರಾಯಣಗೌಡರು ಸಚಿವರಾದ ನಂತರ ಕ್ಷೇತ್ರದ ಅಭಿವೃದ್ಧಿಗೆ 1700 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಿ ಅಭಿವೃದ್ಧಿಯನ್ನೇ ಮೂಲ ಮಂತ್ರವನ್ನಾಗಿಸಿಕೊAಡು ದುಡಿಯುತ್ತಿದ್ದಾರೆ. ಸುಳ್ಳು ಆರೋಪ ಮಾಡುತ್ತಿರುವ ಕೆ.ಆರ್.ಪೇಟೆ ತಾಲ್ಲೂಕಿನ ಜೆಡಿಎಸ್ ಮುಖಂಡರು ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕುರಿತು ದಾಖಲೆಗಳ ಮೂಲಕ ಚರ್ಚೆಗೆ ಬರಲಿ ಎಂದು ತಿರುಗೇಟು ನೀಡಿದರು…

ಸಂತೇಬಾಚಹಳ್ಳಿ ಗ್ರಾಮದಲ್ಲಿ ಶಾಲೆಗೆ ಸೇರಿದ ವ್ಯರ್ಥವಾದ ಜಾಗದಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಸಚಿವರು ಒಂದೂವರೆ ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿ ಬಸ್ ನಿಲ್ದಾಣದ ನಿರ್ಮಾಣಕ್ಕೆ ಚಾಲನೆ ನೀಡಲು ಮುಂದಾಗಿರುವುದನ್ನು ಸಹಿಸದ ಜೆಡಿಎಸ್ ಮುಖಂಡರು ಬಸ್ ನಿಲ್ದಾಣದ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಅಭಿವೃದ್ಧಿ ಕೆಲಸಕ್ಕೆ ವಿರೋಧ ಒಡ್ಡುತ್ತಿದ್ದಾರೆ ಎಂದು ಶ್ರೀನಿವಾಸ್ ಹೇಳಿದರು..

ಪುರಸಭೆಯ ಮಾಜಿಸದಸ್ಯ ಕೆ.ವಿನೋದ್ ಮಾತನಾಡಿ ಮಂಡ್ಯ ಜಿಲ್ಲೆಯ ಜನತೆ ಜಿಲ್ಲೆಯ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದರೂ ಕೇವಲ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಡಿಸದೇ ಕಡೆಗಣಿಸಿದ್ದಾರೆ. ಹಾಸನ ಜಿಲ್ಲೆಗೆ ಬೆಣ್ಣೆ ಹಚ್ಚಿದರೆ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಿ ಸುಣ್ಣ ಹಚ್ಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಮುಖಂಡರಾದ ಕಾರಿಗನಹಳ್ಳಿ ಕುಮಾರ್, ಸಾರಂಗಿನಾಗರಾಜು, ಪುರಸಭೆ ಸದಸ್ಯ ಪ್ರಮೋದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: