April 29, 2024

Bhavana Tv

Its Your Channel

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಕೌಶಲ್ಯದಿನ ಹಾಗೂ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ

ಕೃಷ್ಣರಾಜಪೇಟೆ :– ಮಹಿಳೆಯರು ರಾಷ್ಟ್ರದ ಶಕ್ತಿಯಾಗಿದ್ದು ದೇಶದ ಮುನ್ನಡೆ ಹಾಗೂ ಅಭಿವೃದ್ಧಿಗೆ ಹೆಣ್ಣು ಮಕ್ಕಳ ಕೊಡುಗೆಯು ಅಪಾರವಾಗಿದೆ ಎಂದು ಧಾರ್ಮಿಕ ಚಿಂತಕರು ಹಾಗೂ ನಾಡಿನ ಸಾಂಸ್ಕೃತಿಕ ರಾಯಭಾರಿಗಳಾದ ಶ್ರೀ ಗೋಪಾಲಕೃಷ್ಣ ಅವಧಾನಿಗಳು ಹೇಳಿದರು …

ಅವರು ಕೆ.ಆರ್.ಪೇಟೆ ಪಟ್ಟಣದ ಸಾಹುಕಾರ್ ಚಿಕ್ಕಣ್ಣಗೌಡ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಕೌಶಲ್ಯದಿನ ಹಾಗೂ ವರ ಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು…

ಮಹಿಳೆಯರಿಗೆ ವೃತ್ತಿಕೌಶಲ್ಯ ಮಾರ್ಗದರ್ಶನ. ನೀಡಿ ಆರ್ಥಿಕವಾಗಿ ಸಬಲೀಕರಣ ಸಾಧಿಸಲು ಸಾಲಸೌಲಭ್ಯ ನೀಡಿ, ಹೆಣ್ಣು ಸಂಸಾರದ ಕಣ್ಣು ಎಂಬುದನ್ನು ಸಾಧಿಸಿ ತೋರಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ದಿನದಿಂದ ದಿನಕ್ಕೆ ಹೆಮ್ಮರವಾಗಿ ಬೆಳೆಯುತ್ತಿದೆ. ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ 4800 ಕ್ಕೂ ಹೆಚ್ಚಿನ ಪ್ರಗತಿಬಂಧು ಸ್ತ್ರೀ ಶಕ್ತಿಸ್ವಸಹಾಯ ಸಂಘಗಳು ಕೆಲಸ ಮಾಡುತ್ತಿದ್ದು 50 ಸಾವಿರಕ್ಕೂ ಹೆಚ್ಚಿನ ಹೆಣ್ಣು ಮಕ್ಕಳು ಸೌಲಭ್ಯಗಳನ್ನು ಪಡೆಯುತ್ತಾ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದ ಅವಧಾನಿಗಳು ಹೆಣ್ಣು ಮಕ್ಕಳು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿಹಾಕಿ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿ ಗುಡಿಕೈಗಾರಿಕೆಗಳ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಕರೆ ನೀಡಿದರು…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ಮಾತನಾಡಿ ಹೈನುಗಾರಿಕೆ ಸೇರಿದಂತೆ ಗುಡಿಕೈಗಾರಿಕೆಗಳನ್ನು ಸ್ಥಾಪಿಸಿ ಮಹಿಳೆಯರು ಅಭಿವೃದ್ಧಿಯ ಪಥದತ್ತ ಸಾಗುವ ಜೊತೆಗೆ ಇಡೀ ಕುಟುಂಬ ಹಾಗೂ ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ಗ್ರಾಮಾಭಿವೃದ್ಧಿಗೆ ಒತ್ತು ನೀಡಿ ಕಾರ್ಯಕ್ರಮಗಳನ್ನು ರೂಪಿಸಿ ಕೆಲಸ ಮಾಡುತ್ತಿರುವ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗಡೆಯವರು ನಮ್ಮೆಲ್ಲರಿಗೂ ಪ್ರೇರಕ ಶಕ್ತಿಯಾಗಿದ್ದಾರೆ. ರಾಜ್ಯಸಭೆಯ ಸದಸ್ಯರಾಗಿ ಪೂಜ್ಯ ಖಾವಂದರು ನೇಮಕವಾಗಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದು ಮಮತಾಶೆಟ್ಟಿ ಹೇಳಿದರು..

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಕೆ.ಆರ್.ನೀಲಕಂಠ ಮಾತನಾಡಿ ಕಳೆದ 08 ವರ್ಷಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಾಫಲ್ಯದ ಫಲವು ಪ್ರತೀ ಮನೆ ಮನೆಗೂ ತಲುಪಿದೆ. ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಹೆಣ್ಣು ಮಕ್ಕಳಲ್ಲಿ ಅರಿವಿನ ಜಾಗೃತಿ ಮೂಡಿಸುತ್ತಿರುವ ಯೋಜನೆಯು ತಂದೆ-ತಾಯಿಗಳು ಹಾಗೂ ಗುರುಹಿರಿಯರಿಗೆ ಭಕ್ತಿಭಾವ ಬೆಳೆಸುವ ಜೊತೆಗೆ ಶಿಸ್ತು ಮತ್ತು ಬದ್ಧತೆಯ ಬಗ್ಗೆ ಅರಿವಿನ ಜಾಗೃತಿ ಮೂಡಿಸುತ್ತಿದೆ. ಸಮಾಜದ ಬದಲಾವಣೆ ಹಾಗೂ ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳ ಯೋಜನೆಯ ಕೊಡುಗೆಯು ಅಪಾರವಾಗಿದೆ ಎಂದು ಹೇಳಿದರು..

ಗ್ರಾಮಭಾರತಿ ಪ್ರೌಢಶಾಲೆಯ ಶಿಕ್ಷಕ ವಜ್ರಪ್ರಸಾದ್, ಮಂಡ್ಯ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಮೋಹನಕುಮಾರಿ, ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವಿಭಾಗ ಕಛೇರಿಯ ಸಂಪನ್ಮೂಲ ವ್ಯಕ್ತಿ ರತ್ನಾ, ಪತ್ರಕರ್ತ ಸೈಯ್ಯದ್ ಖಲೀಲ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ .

error: