May 14, 2024

Bhavana Tv

Its Your Channel

ವಿಶ್ವಪೌಷ್ಠಿಕ ಆಹಾರ ದಿನ ಹಾಗೂ ಪೋಷಣ್ ಅಭಿಯಾನದ ಅಂಗವಾಗಿ ಹೆಣ್ಣುಮಕ್ಕಳಿಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ

ಕೃಷ್ಣರಾಜಪೇಟೆ :- ಮಕ್ಕಳು ಹಾಗೂ ತಾಯಂದಿರು ಹಣ್ಣು, ತರಕಾರಿಗಳು, ಸೊಪ್ಪು ಸೇರಿದಂತೆ ಕಾಳುಗಳನ್ನು ಬಳಸುವ ಮೂಲಕ ಪೌಷ್ಟಿಕಾಂಶಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು, ಅಮೃತ ಸಮಾನವಾದ ತಾಯಿಯ ಎದೆಯ ಹಾಲನ್ನು ಮಕ್ಕಳಿಗೆ ನಿಯಮಿತವಾಗಿ ನೀಡುವ ಮೂಲಕ ಮಕ್ಕಳ ಆರೋಗ್ಯ ಸಂವರ್ಧನೆಗೆ ತಾಯಂದಿರು ಮುಂದಾಗಬೇಕು ಎಂದು ಪಟ್ಟಣದ ಜೆಎಂಎಫ್ ಸಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಓಂಕಾರಮೂರ್ತಿ ಮನವಿ ಮಾಡಿದರು …

ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದ ಪುರಸಭೆಯ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಶ್ರೀ ಕೋಟೆ ಭೈರವೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ತಾಲ್ಲೂಕು ಕಾನೂನು ಸೇವಾಸಮಿತಿ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ವಿಶ್ವಪೌಷ್ಠಿಕ ಆಹಾರ ದಿನ ಹಾಗೂ ಪೋಷಣ್ ಅಭಿಯಾನದ ಅಂಗವಾಗಿ ಹೆಣ್ಣುಮಕ್ಕಳಿಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಕ್ಕಳಿಗೆ ಅನ್ನಪೋಶಣೆ ಮಾಡಿಸಿ ಮಾತನಾಡಿದರು…
ಇಂದಿನ ದಿನಮಾನದ ಆಹಾರ ಪದ್ಧತಿಯಿಂದಾಗಿ ಮಕ್ಕಳು ಹಾಗೂ ತಾಯಂದಿರಿಗೆ ಪೌಷ್ಟಿಕಾಂಶದ ಕೊರತೆಯಿಂದಾಗಿ ಮಕ್ಕಳು ಹಾಗೂ ತಾಯಂದಿರು ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಾರೆ ಆದ್ದರಿಂದ ತಾಯಂದಿರು ಪೌಷ್ಟಿಕಾಂಶಗಳಿAದ ಕೂಡಿರುವ ಆಹಾರ ಪದಾರ್ಥಗಳನ್ನು ಸೇವಿಸುವ ಜೊತೆಗೆ ಮಕ್ಕಳಿಗೆ ಹಣ್ಣು ತರಕಾರಿಗಳು, ಮೊಟ್ಟೆ ಹಾಲು ಸೇರಿದಂತೆ ಪೌಷ್ಟಿಕಾಂಶಗಳಿAದ ಕೂಡಿರುವ ಆಹಾರ ಪದಾರ್ಥಗಳನ್ನು ನೀಡಿ ಮಕ್ಕಳ ಅಕಾಲಿಕ ಸಾವನ್ನು ತಡೆಯಲು ಸಂಕಲ್ಪ ಮಾಡಬೇಕು ಎಂದು ಓಂಕಾರಮೂರ್ತಿ ಮನವಿ ಮಾಡಿದರು..

ವಕೀಲರಾದ ಬಂಡಿಹೊಳೆ ಗಣೇಶ್ ಮಾತನಾಡಿ ಇಂದಿನ ಮಕ್ಕಳೇ ನಾಳಿನ ಭವ್ಯಭಾರತದ ಸತ್ಪ್ರಜೆಗಳಾದ್ದರಿಂದ ಮಕ್ಕಳ ಆರೋಗ್ಯ ಸಂವರ್ಧನೆಗೆ ಪೋಷಕರು ಮುಂದಾಗಬೇಕು. ಪೌಷ್ಟಿಕಾಂಶಗಳ ಆಹಾರದ ಕೊರತೆ ಹಾಗೂ ಹಸಿವಿನಿಂದ ಉಂಟಾಗುವ ಮಕ್ಕಳ ಸಾವಿನ ಪ್ರಮಾಣವನ್ನು ತಪ್ಪಿಸುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಗಣೇಶ್ ಕರೆ ನೀಡಿದರು..

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ ಮಾತನಾಡಿ ಮೊಳಕೆ ಕಾಳುಗಳು ಸೇರಿದಂತೆ ಸೊಪ್ಪು ತರಕಾರಿಯನ್ನು ತಾಯಂದಿರು ನಿಯಮಿತವಾಗಿ ಸೇವಿಸಬೇಕು. ಆಯಾ ಋತುಮಾನಗಳಲ್ಲಿ ದೊರೆಯುವ ಹಣ್ಣುಗಳನ್ನು ಸೇವಿಸುವ ಮೂಲಕ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ತಾಯಂದಿರು ಮಕ್ಕಳಿಗೆ ಕಡ್ಡಾಯವಾಗಿ ಎದೆಹಾಲನ್ನು ಉಣಿಸಬೇಕು. ರಸ್ತೆಬದಿಯಲ್ಲಿ ಮಾರಾಟ ಮಾಡುವ ತಿನಿಸುಗಳು ಸೇರಿದಂತೆ ಬೇಕರಿ ಉತ್ಪನ್ನಗಳನ್ನು ಸೇವಿಸಬಾರದು. ಕುಡಿಯಲು ಶುದ್ಧವಾದ ನೀರನ್ನೇ ಬಳಸಬೇಕು ತಾಯಂದಿರು ಸಾಮಾಜಿಕ ಕಟ್ಟುಪಾಡುಗಳು ಹಾಗೂ ಕಂದಾಚಾರಗಳ ಸುಳಿಗೆ ಸಿಲುಕದೇ ನಿಯಮಿತವಾಗಿ ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು..

ತಹಶೀಲ್ದಾರ್ ಎಂ.ವಿ.ರೂಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ತಾಯಿ ಮಕ್ಕಳ ಆರೋಗ್ಯ ಸಂವರ್ಧನೆಗೆ ಸರ್ಕಾರವು ಬದ್ಧವಾಗಿದೆ. ಅಂಗನವಾಡಿ ಕೇಂದ್ರದ ಮೂಲಕ ನೀಡುವ ಪೌಷ್ಟಿಕಾಂಶಗಳ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಆಶಾ ಅಂಗನವಾಡಿ ಕಾರ್ಯಕರ್ತರ ಸೇವೆಯು ನಿರ್ಣಾಯಕವಾಗಿದೆ ಎಂದು ತಹಶೀಲ್ದಾರ್ ಅಭಿಮಾನದಿಂದ ಹೇಳಿದರು..

ಅಪರ ಸಿವಿಲ್ ನ್ಯಾಯಾಧೀಶರಾದ ಶಕುಂತಲಾ, ಸಿಡಿಪಿಓ ಅರುಣಕುಮಾರ್, ತಾಲ್ಲೂಕು ಆಯುಷ್ ವೈದ್ಯಾಧಿಕಾರಿ ಡಾ.ಲೋಕೇಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಪ್ರತಿಭಾ ಮಹಿಳಾ ಮಂಡಳಿಯ ಅಧ್ಯಕ್ಷೆ ಕೆ.ಮಂಜುಳಾ ಚನ್ನಕೇಶವ, ಸರ್ಕಾರಿ ಅಭಿಯೋಜಕ ರಾಜೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಪದ್ಮಾ ಸ್ವಾಗತಿಸಿದರು, ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.
ಅಂಗನವಾಡಿ ಕಾರ್ಯಕರ್ತೆ ಉಮ್ಮೆಸಲ್ಮಾ ಪ್ರಾರ್ಥಿಸಿದರು.. ಅಂಗನವಾಡಿ ಕಾರ್ಯಕರ್ತೆಯರು ಪೌಷ್ಟಿಕಾಂಶ ಕುರಿತು ಆಯೋಜಿಸಿದ್ದ ವಸ್ತುಗಳ ಪ್ರದರ್ಶನವು ಅತಿಥಿಗಳು ಹಾಗೂ ಸಾರ್ವಜನಿಕರ ಗಮನ ಸೆಳೆಯಿತು..
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: