May 10, 2024

Bhavana Tv

Its Your Channel

“ಯಲ್ಲಾಪುರದಲ್ಲಿ ಬಾಳೆಕಾಯಿಗೆ ಬೆಲೆ ಇಲ್ಲದೆ ರೈತ ಕಂಗಾಲು, ಬಾಳೆಗಿಡಗಳನ್ನು ಕಡಿಯುತ್ತಿರುವ ರೈತರು”

ಯಲ್ಲಾಪುರ : ಬಾಳೆಕಾಯಿಗೆ ಬೆಲೆಯಿಲ್ಲದೆ ರೈತರು ಬಾಳೆ ಗಿಡಗಳನ್ನು ಕತ್ತರಿಸುವ ದೃಶ್ಯ ತಾಲ್ಲೂಕು ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿದೆ.
ಯಲ್ಲಾಪುರ ತಾಲೂಕು ಅಡಿಕೆ ಹಾಗೂ ತೆಂಗಿನಕಾಯಿಗೆ ಎಷ್ಟು ಪ್ರಖ್ಯಾತಿ ಹೊಂದಿದೆಯೋ, ಅಷ್ಟೇ ಪ್ರಖ್ಯಾತಿ ಬಾಳೆಗೂ ಹೊಂದಿದೆ, ರಾಷ್ಟ್ರೀಯ ಹೆದ್ದಾರಿ ಮೇಲೆ ಸಂಚರಿಸುವ ಪ್ರಯಾಣಿಕರು ಯಲ್ಲಾಪುರದಲ್ಲಿ ಇಳಿದು ಬಾಳೆ ಹಣ್ಣುಗಳನ್ನು ಖರೀದಿಸಿ ಮುಂದೆ ಹೋಗುತ್ತಾರೆ. ಹೆಚ್ಚಿನ ಬಾಳೆಕಾಯಿ ಕಾರವಾರ,ಗೋವಾಕ್ಕೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದರು.ಆದರೆ ಕೊರೋನಾ ಸೋಂಕು ನಿವಾರಣಗೆ ಆದೇಶಿಸಲಾದ ಲಾಕಡೌನ್ ನಿಂದಾಗಿ ಬಾಳೆ ಬೆಳೆಗಾರರ ಪರಿಸ್ಥಿತಿ ತೊಂದರೆಯಲ್ಲಿದೆ. ಬಾಳೆಹಣ್ಣುಗಳನ್ನು ಬಹಳ ದಿನ ಶೇಖರಣೆ ಮಾಡಿ ಇಡಲಾಗದು, ಹಣ್ಣಾದ ನಂತರ ಅವುಗಳನ್ನು ಮಾರಾಟ ಮಾಡದಿದ್ದರೆ ಅಲ್ಲಿಯೇ ಕೊಳೆತು ನಾಶವಾಗುತ್ತದೆ. ಈ ಸಮಯದಲ್ಲಿ ಯಲ್ಲಾಪುರ ತಾಲೂಕು ಹೊರತುಪಡಿಸಿ ಬೇರೆ ಪ್ರದೇಶದಗಳಲ್ಲಿ ಮಾರುಕಟ್ಟೆ ಲಭ್ಯವಾಗದೇ ಇರುವ ಕಾರಣಕ್ಕೆ ಬಹಳಷ್ಟು ಜನ ರೈತರು ಅಡಿಕೆ ಮಧ್ಯೆ ಬೆಳೆದ ಬಾಳೆ ಗಿಡಗಳನ್ನು ಕತ್ತರಿಸಿ ಹಾಕುತ್ತಿದ್ದಾರೆ.
ಮಧ್ಯವರ್ತಿಗಳಿಗೆ ಗ್ರಾಮೀಣ ಭಾಗದಲ್ಲಿ ೩ರಿಂದ ೪ರೂ ಕೆಜಿಗೆ ಮಾರಾಟವಾಗುವ ಬಾಳೆ ಗೊನೆಗಳು, ಪಟ್ಟಣ ವ್ಯಾಪ್ತಿಯಲ್ಲಿ ೨೫ರಿಂದ ೩೫ರೂಪಾಯಿ ಕೆಜಿಗೆ ಮಾರಾಟವಾಗುತ್ತಿದೆ. ಅದರ ನೇರವಾದ ಲಾಭ ರೈತನಿಗೆ ದೊರಕದೆ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂಬುದು ಬಾಳೆ ಬೆಳೆದಿರುವ ರೈತ ಗಣಪತಿ ಅಡಿಕೆಸರ ಅಭಿಪ್ರಾಯವಾಗಿದೆ.
ಗಣಪತಿ ಅಡಿಕೆಸರ ತಮ್ಮ ತೋಟದಲ್ಲಿ ಬೆಳೆದ ಬಾಳೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ನೇರವಾಗಿ ಲಾಭದ ಹಣ ಬಾಳೆ ಬೆಳೆದ ತಮಗೂ ಸೇರುತ್ತಿಲ್ಲ, ಗ್ರಾಹಕರಿಗೆ ಹೊರೆಯಾಗುತ್ತಿದೆ ಎನ್ನುವುದೇ ಅವರ ಚಿಂತನೆಯಾಗಿದೆ.
ಒಟ್ಟಾರೆ ಲಾಕ್ ಡೌನ್ ಮಧ್ಯೆ ಬೇಗ ಬೆಳೆದು, ಮಾರಾಟವಾಗುವ ಮತ್ತು ಹಾಳಾಗುವ ಬೆಳೆಗಳಿಗೆ ಬೆಲೆ ಇದ್ದರೂ ಕೂಡ ಬೆಳೆದ ರೈತರಿಗೆ ಬೆಲೆ ದೊರಕದ ಪರಿಸ್ಥಿತಿ ಬಂದಿದೆ..
ವರದಿ ; ವೇಣುಗೋಪಾಲ ಮದ್ಗುಣಿ,ಯಲ್ಲಾಪುರ

error: