April 29, 2024

Bhavana Tv

Its Your Channel

ಸಾಧನೆ ಮಾಡಬೇಕಾದರೆ ವೇದನೆಯನ್ನ ಅನುಭವಿಸಲೇ ಬೇಕು ವೇದನೆಯಿಲ್ಲದೇ ಸಾಧನೆ ಇಲ್ಲ-ಶ್ರೀ ರಾಘವೇಶ್ವರ ಸ್ವಾಮೀಜಿ

ಭಟ್ಕಳ: ಪ್ರತಿಯೊಬ್ಬರೂ ಕೂಡಾ ಸಾಧನೆ ಮಾಡಬೇಕಾದರೆ ವೇದನೆಯನ್ನ ಅನುಭವಿಸಲೇ ಬೇಕು ವೇದನೆಯಿಲ್ಲದೇ ಸಾಧನೆ ಇಲ್ಲ ಎಂದು ಶ್ರೀ ರಾಘವೇಶ್ವರ ಸ್ವಾಮೀಜಿಯವರು ಹೇಳಿದರು.

ಅವರು ಮುರ್ಡೇಶ್ವರದ ಖಾಸಗೀ ಕಾರ್ಯಕ್ರಮವೊಂದಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಿದ್ದರು.
ಪೀಠದ ಸಾಧನೆಯ ಹಿಂದೆಯೂ ಕೂಡಾ ವೇದನೆಯನ್ನು ಅನುಭವಿಸಿದ್ದನ್ನು ಉದಾಹರಿಸಿದ ಅವರು ಪ್ರತಿಯೊಂದು ಸಾಧನೆಯನ್ನು ಛಲದಿಂದ ಮಾಡಿದಾಗ ಯಶಸ್ಸು ದೊರೆಯುವುದು. ಸಾಧನೆಯ ದಾರಿ ಯಾವತ್ತೂ ಮುಳ್ಳುಗಳ ದಾರಿಯಾಗಿದ್ದು ಅದನ್ನ ದಾಟಿಕೊಂಡು ಹೋಗುವುದೇ ಗುರಿಯಾದಾಗ ಮಾತ್ರ ಸಾಧನೆ ಸಾಧ್ಯವಾಗುವುದು. ಪ್ರತಿಯೋರ್ವರೂ ಕೂಡಾ ಕಷ್ಟದ ದಾರಿಯನ್ನೇ ಆರಿಸಿಕೊಂಡು ಸಾಧಕರಾಗಿ ಹೊರ ಹೊಮ್ಮಬೇಕು ಎಂದು ಹೇಳಿದರು.
ಉತ್ತಮ ಫಲ ಪಡೆಯಬೇಕೆಂದರೆ ಸಾಹಸವನ್ನು ಮಾಡಲೇ ಬೇಕು. ಸಾಹಸ ಮಾಡುವವನು ಮುಂದೆ ಉತ್ತಮವಾದುದನ್ನೇ ಅನುಭವಿಸುತ್ತಾನೆ ಎಂದ ಶ್ರೀಗಳು ನಾವು ಶ್ರಮದಿಂದ ಪಡೆದ ಹಣವನ್ನು ಮಾತ್ರ ಆಸೆ ಪಡಬೇಕು. ಇನ್ನೊಬ್ಬರ ಧನಕ್ಕೆ ಆಸೆ ಪಡಬಾರದು ಎಂದರು. ರಾಮಾಯಣದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ, ಸೀತಾಪಹರಣ ನಡೆಯದಿದ್ದರೆ ಇಂದು ರಾಮಾಯಣ ಪ್ರಸ್ತುತ ಎನಿಸುತ್ತಿರಲಿಲ್ಲ, ಹನುಮಂತನ ಬೃಹತ್ ಶಕ್ತಿ ಪ್ರದರ್ಶನವೂ ಆಗುತ್ತಿರಲಿಲ್ಲ ಎಂದರು. ಸವಾಲು ಮತ್ತು ಸಾಧನೆಗೆ ಶ್ರೀ ರಾಮ ಒಂದು ಉತ್ತಮ ಉದಾಹರಣೆಯೆಂದ ಶ್ರೀಗಳು ಶ್ರೀರಾಮನು ಅಧಿಕಾರವನ್ನು ಬಟ್ಟೆಗಂಟಿದ ಹುಲ್ಲು ಕಡ್ಡಿಯನ್ನು ಕೊಡವಿ ಹಾಕುವಂತೆ ಅಧಿಕಾರವನ್ನು ಬಿಟ್ಟು ಹೊರಟು ಇಂದಿಗೂ ಮಾದರಿಯಾಗಿದ್ದಾನೆ ಎಂದರು.
ಆಶೀರ್ವಚನಕ್ಕೂ ಪೂರ್ವ ಶ್ರೀಗಳ ಪಾದುಕಾ ಪೂಜೆಯನ್ನು ಮುರ್ಡೇಶ್ವರದ ಯೋಗೀಶ ಭಟ್ಟ ಹಾಗೂ ರೇಷ್ಮಾ ಭಟ್ಟ ನೆರವೇರಿಸಿದರು. ವಿಧ್ವಾನ್ ನೀಲಕಂಠ ಯಾಜಿ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಶ್ರೀಗಳು ದೇನು ಗೋ ಶಾಲೆಯನ್ನು ವೀಕ್ಷಿಸಿ ಕೆಲ ಕಾಲ ಗೋವುಗಳೊಂದಿಗೆ ಇದ್ದು ಮುಂದಿನ ಪ್ರಯಾಣ ಬೆಳೆಸಿದರು.
ಶ್ರೀಗಳ ಮೊಕ್ಕಾಂನಲ್ಲಿ ಹವ್ಯಕ ವಲಯದ ಪದಾಧಿಕಾರಿಗಳು, ಗುರಿಕಾರರು, ಊರ ನಾಗರೀಕರು, ಮಾಜಿ ಶಾಸಕ ಮಂಕಾಳ ಎಸ್. ವೈದ್ಯ ದಂಪತಿ, ಜೆ.ಡಿ.ನಾಯ್ಕ, ಮಾವಳ್ಳಿ ವಲಯದ ನಾಮಧಾರಿ ಸಮಾಜದ ಅಧ್ಯಕ್ಷ ಸುಬ್ರಾಯ ನಾಯ್ಕ, ಪದಾಧಿಕಾರಿಗಳು ಆಶೀರ್ವಚನ ಪೂರ್ವಕ ಮಂತ್ರಾಕ್ಷತೆಯನ್ನು ಪಡೆದರು.

error: