May 2, 2024

Bhavana Tv

Its Your Channel

ಶ್ರೀ ಸೋಮೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒಂದು ಲಕ್ಷ ರೂಪಾಯಿ ಧನಸಹಾಯ

ಹೊನ್ನಾವರ ತಾಲೂಕಿನ ಮುಟ್ಟದ ಗುಂಡಬಾಳ ಶ್ರೀ ಸೋಮೇಶ್ವರ ದೇವಾಲಯ ಜಿರ್ಣೋದ್ಧಾರ ಸಮಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒಂದು ಲಕ್ಷ ರೂಪಾಯಿ ಧನಸಹಾಯ ನೀಡಲಾಯಿತು.

ಸೋಮೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಪೂಜ್ಯ ಖಾವಂದರಲ್ಲಿ ಧನಸಹಾಯಕ್ಕಾಗಿ ಸಮಿತಿಯವರು ಅರ್ಜಿ ಸಲ್ಲಿಸಿದ್ದರು. ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಒಂದು ಲಕ್ಷ ರೂಪಾಯಿ ಮಂಜೂರುಗೊಳಿಸಿದ್ದರು. ಡಿ.ಡಿ ಯನ್ನು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಮುಖಾಂತರ ಕಳುಹಿಸಿಕೊಟ್ಟಿದ್ದರು.

ಅದರಂತೆಯೇ ಗ್ರಾಮಾಭಿವೃದ್ಧಿ ಯೋಜನೆಯ ಹೊನ್ನಾವರ ತಾಲೂಕಿನ ಯೋಜನಾಧಿಕಾರಿ ವಾಸಂತಿ ದೇವಾಲಯಕ್ಕೆ ಭೇಟಿ ನೀಡಿ, ಮೊಕ್ತೇಸರ ಮಾಧವ ಪ್ರಭು ಅವರಿಗೆ ಒಂದು ಲಕ್ಷ ರೂಪಾಯಿ ಮೊತ್ತದ ಡಿ.ಡಿ ಯನ್ನು ನೀಡಿದರು.
ಬಳಿಕ ಮಾತನಾಡಿ “ಶ್ರೀ ಕ್ಷೇತ್ರದಿಂದ ನೀಡಿದ ಧನಸಹಾಯವು ಗ್ರಾಮದ ಭಕ್ತಾದಿಗಳ ಸಂಘಟನೆಗೆ ಹಾಗೂ ಧಾರ್ಮಿಕ ಆರಾಧನೆಗೆ ಸದ್ವಿನಿಯೋಗವಾಗಲಿ.” ಎಂದರು.

ಮೊಕ್ತೇಸರ ಮಾಧವ ಪ್ರಭು ಮಾತನಾಡಿ “ಕಳೆದ ಹನ್ನೆರಡು ವರ್ಷಗಳಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಇಲ್ಲಿಯವರೆಗೆ ಸುಮಾರು ಹದಿನೆಂಟು ಲಕ್ಷ ರೂಪಾಯಿ ಖರ್ಚಾಗಿತ್ತು. ಈಗ ಶ್ರೀ ಕ್ಷೇತ್ರದಿಂದಲೂ ಧನಸಹಾಯ ನೀಡಿರೋದು ಅನುಕೂಲವಾಯಿತು. ಮುಂದಿನ ದಿನಗಳಲ್ಲಿ ಭಕ್ತಾದಿಗಳು ತನು ಮನ ಧನ ಗಳಿಂದ ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು.” ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಯೋಜನೆಯ ವಲಯ ಮೇಲ್ವಿಚಾರಕ ಶ್ರೀ ರಾಜು, ಸೇವಾಪ್ರತಿನಿಧಿ ರಮೇಶ ನಾಯ್ಕ್, ಅನಿತಾ ನಾಯ್ಕ್, ಒಕ್ಕೂಟದ ಅಧ್ಯಕ್ಷ ಶ್ರೀಧರ ನಾಯ್ಕ್, ಕಾರ್ಯದರ್ಶಿ ನರಸಿಂಹ ನಾಯ್ಕ್ ಹಾಗೂ ಸದಸ್ಯರು, ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಉಪಸ್ಥಿತರಿದ್ದರು.

ವರದಿ- ನರಸಿಂಹ ನಾಯ್ಕ್ ಹರಡಸೆ

error: