April 22, 2021

Bhavana Tv

Its Your Channel

ಭಟ್ಕಳ ಶಿರೂರು ಗಡಿಯ ಟೋಲ್‌ಗೇಟ್‌ನಲ್ಲಿ ಐಆರ್‌ಬಿ ಹಾಗೂ ಹೆದ್ದಾರಿ ಅಧಿಕಾರಿಗಳ ವಿರುದ್ಧ ಜನರ ಹಿಡಿಶಾಪ

ಭಟ್ಕಳ: ಮೂರ್ನಾಲ್ಕು ದಶಕಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದಾಗ ಎಲ್ಲರೂ ಸಂಭ್ರಮಪಟ್ಟಿದ್ದರು. ಹೊಸದಾಗಿ ಚತುಷ್ಪಥ ರಸ್ತೆ ನಿರ್ಮಿಸಲಾಗುತ್ತಿದೆ ಎಂದಾಗಲೂ ಈ ಭಾಗದಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ಎಲ್ಲರೂ ಸ್ವಾಗತಿಸಿದ್ದರು. ಆದರೆ ಹೆದ್ದಾರಿ ಪ್ರಾಧಿಕಾರ, ಕಾಮಗಾರಿ ಗುತ್ತಿಗೆ ಹಿಡಿದ ಐಆರ್‌ಬಿ ಕಂಪೆನಿ ಹಲವಾರು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದ್ದು, ಜನರಿಗೆ ಸೂಕ್ತ ಪರಿಹಾರ ದೊರಕಿಸಿ ಕೊಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಭಟ್ಕಳ ಶಿರೂರು ಗಡಿಭಾಗದ ಜನರು ಟೋಲ್ ಗೇಟ್ ಸಮೀಪ ಜಮಾಯಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಶಿರೂರು ಟೋಲ್‌ಗೇಟ್‌ನ್ನು ಜನವಸತಿ ಪ್ರದೇಶದಿಂದ ೧೫ ಅಡಿಗೂ ಹೆಚ್ಚು ಎತ್ತರದ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಹೆದ್ದಾರಿ ಪಕ್ಕದ ನಿವಾಸಿಗಳು ಹೆದ್ದಾರಿ ತಲುಪಲು ಗುಡ್ಡ ಏರಿದಂತೆ ಹತ್ತಿ ಬರಬೇಕಾಗಿದೆ. ಅಲ್ಲದೇ ಟೋಲ್‌ಗೇಟ್ ನಿರ್ಮಾಣಕ್ಕಾಗಿ ಕೆರೆಗಳನ್ನು ಹಾಗೂ ಇಲ್ಲಿ ಇದ್ದ ೨ ಬೋರ್‌ವೆಲ್‌ಗಳನ್ನು ಮುಚ್ಚಲಾಗಿದೆ.
ಹೆದ್ದಾರಿ ನಿರ್ಮಾಣ ಅಭಿವೃದ್ಧಿಯ ಭಾಗವಾಗಿದೆ. ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದಾಗ ಜನರಿಗೆ ತೊಂದರೆಯಾಗಿರಲಿಲ್ಲ. ಆದರೆ ಚತುಷ್ಪಥ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಇಲ್ಲಿನ ಜನರಿಗೆ ದೊಡ್ಡ ಸಮಸ್ಯೆಯನ್ನು ತಂದೊಡ್ಡಲಾಗಿದೆ. ಐಆರ್‌ಬಿ ಅಧಿಕಾರಿಗಳು ಬೇಜವಾಬ್ದಾರಿ ಯಾಗಿ ವರ್ತಿಸುತ್ತಿದ್ದಾರೆ. ಯಾವುದೇ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಸುಲಭದಲ್ಲಿ ಆಗಬೇಕಾದ ಕೆಲಸಗಳೂ ಆಗುತ್ತಿಲ್ಲ. ನಾಮಫಲಕಗಳಲ್ಲಿ ಊರಿನ ಹೆಸರನ್ನೇ ಬದಲಿಸಲಾಗಿದೆ ಎಂದು ಸುರೇಶ ಬಟ್ವಾಡೆ,ಉಡುಪಿ ಜಿಪಂ ಸದಸ್ಯರು ಹೇಳಿದರು.
ರೈತರು ಬೇಸಾಯ ಮಾಡಲು ನೀರಿನ ಅಭಾವವನ್ನು ಎದುರಿಸುತ್ತಿದ್ದಾರೆ.ಈ ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ವಸತಿಹೀನರಿಗೆ ನಿವೇಶನ ನೀಡಿದ್ದು, ಇದೀಗ ಟೋಲ್‌ನಾಕಾದಿಂದಾಗಿ ಮತ್ತೆ ಬಹಳ ಜನರು ವಸತಿಹೀನರಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನವನ್ನೇ ಹರಿಸುತ್ತಿಲ್ಲ. ಟೋಲ್‌ಗೇಟ್ ಪ್ರದೇಶವು ಬೋಳು ಗುಡ್ಡದಂತೆ ಇದ್ದು, ಬಸ್ಸಿಗಾಗಿ ಬರುವ ಜನರಿಗೆ ತಂಗುದಾಣದ ಅವಶ್ಯಕತೆ ಇದೆ. ಅಳ್ವೇಗದ್ದೆ ರಸ್ತೆಯಿಂದ ರಸ್ತೆ ವಿಭಾಜಕದ ತನಕ ೧೦೦ಮೀ. ಅಂತರದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ಭಾಗದಲ್ಲಿ ಸಂಪರ್ಕ ರಸ್ತೆ ನಿರ್ಮಾಣಕ್ಕೂ ಒತ್ತು ನೀಡಬೇಕಾಗಿದೆ. ಅಲ್ಲದೇ ಟೋಲ್‌ಗೇಟ್ ಇರುವ ಪ್ರದೇಶವು ಬಪ್ಪನಬೈಲು ಗ್ರಾಮದಲ್ಲಿ ಬರುತ್ತಿದ್ದು, ಸದರಿ ಟೋಲ್‌ಗೇಟ್‌ನ್ನು ಬಪ್ಪನಬೈಲು ಟೋಲ್‌ಗೇಟ್ ಎಂದು ಮರುನಾಮಕರಣ ಮಾಡಬೇಕು, ಟೋಲ್‌ನಾಕಾದಲ್ಲಿ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಐಆರ್‌ಬಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೂರೂ ಬಿಟ್ಟಿದ್ದಾರೆ. ಜನಪ್ರತಿನಿಧಿಗಳು ಸಭೆ ಕರೆದಾಗ ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿ ಹೋಗುವ ಅಧಿಕಾರಿಗಳು ಯಾವುದೇ ಕೆಲಸವನ್ನು ಮಾಡುತ್ತಿಲ್ಲ. ಜನರ ಬಗ್ಗೆ ಎಷ್ಟೊಂದು ನಿರ್ಲಕ್ಷ್ಯ ಎಂದರೆ ಅದಕ್ಕೊಂದು ಮಿತಿಯೇ ಇಲ್ಲ. ಎಂದು ಬೈಂದೂರು ತಾಪಂ ಸದಸ್ಯರು ಪುಷ್ಪರಾಜ್ ಶೆಟ್ಟಿ, ಹೇಳಿದರು.
ಐಆರ್‌ಬಿ ಕಂಪನಿಯವರು ನಮ್ಮ ಊರಿನಲ್ಲಿ ಮಾಡಿರುವ ಅಸಮರ್ಪಕ ಕಾಮಗಾರಿಯನ್ನು ಮಹಾರಾಷ್ಟ್ರದಲ್ಲಿ ಕೈಗೊಂಡಿದ್ದರೆ, ಅವರು ಹಾಗೂ ಅವರ ಟೋಲ್‌ನಾಕಾವನ್ನು ಅಲ್ಲಿನ ಜನರೇ ಓಡಿಸಿ ಬಿಡುತ್ತಿದ್ದರು, ಆದರೆ ಇಲ್ಲಿನ ಜನರು ಅಭಿವೃದ್ಧಿ ಕಾಮಗಾರಿಗಳಿಗೆ ಮೊದಲಿನಿಂದ ಸಹಕರಿಸುತ್ತ ಬಂದಿದ್ದಾರೆ. ಆದರೆ ಜನರ ತಾಳ್ಮೆಯನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸುವುದು ಬೇಡ ಎಂದು ಮುಖಂಡರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು. ನಂತರ ಸ್ಥಳಕ್ಕೆ ಬಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯವಸ್ಥಾಪಕ ರಮೇಶ ಅವರಿಗೆ ಈ ಕುರಿತು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿರೂರು ಗ್ರಾ.ಪಂ ಅಧ್ಯಕ್ಷೆ ಜಿ.ಯು ದಿಲ್‌ಶಾದ್ ಬೇಗಂ,ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್,ಸ್ಥಳೀಯರಾದ ಸುಬ್ರಾಯ ನಾಯ್ಕ ಹಾಜರಿದ್ದರು.
ಬಳಿಕ ಐ.ಆರ್.ಬಿ ಅಧಿಕಾರಿಗಳಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಲಾಯಿತು. ಪತ್ರಕರ್ತ ಅರುಣ ಕುಮಾರ್ ಶಿರೂರು, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

error: