May 15, 2024

Bhavana Tv

Its Your Channel

ಪುರಸಭೆ ಮಾಜಿ ಅಧ್ಯಕ್ಷ ಮಧುಸೂಧನ ಶೇಟ್ ಅವರ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ

ಕುಮಟಾ : ಪಟ್ಟಣದ ಹಳೇ ಹೆರವಟ್ಟಾದ ಬಸ್ ಡಿಪೋ ಹಿಂಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಹಾಗಾಗಿ ಅಲ್ಲಿನ ಹೊಸ ಹಿತ್ತಲ ಮತ್ತು ರಾಮನಗರ ನಾಗರಿಕರು ಪುರಸಭೆ ಮಾಜಿ ಅಧ್ಯಕ್ಷ ಮಧುಸೂಧನ ಶೇಟ್ ಅವರ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಬಸ್ ಡಿಪೋ ಪಕ್ಕದಿಂದ ಚಂದಾವರಕ್ಕೆ ಹೋಗುವ ಮುಖ್ಯ ರಸ್ತೆಗೆ ಸೇರುವ ಕೊಂಡಿ ರಸ್ತೆಯಾಗಿದ್ದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಇದೇ ರಸ್ತೆಯನ್ನು ಬಳಸುತ್ತಿರುವುದರಿಂದ ಜನ ಬಳಕೆಯ ಅತೀ ಅವಶ್ಯಕ ರಸ್ತೆಯಾಗಿದೆ. ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರಕ್ಕೆ ತೀರಾ ತೊಂದರೆಯಾಗಿದೆ. ಈ ಬಗ್ಗೆ ಈಗಾಗಲೇ ಶಾಸಕ ದಿನಕರ ಶೆಟ್ಟಿ ಅವರ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನ ಬಂದಾಗ ಈ ರಸ್ತೆಯನ್ನು ಕಾಂಕ್ರೀಟ್‌ಕರಣಗೊಳಿಸುವ ಭರವಸೆಯನ್ನು ಶಾಸಕರು ನೀಡಿದ್ದರು. ಅದರಂತೆ ಈಗ ಶಾಸಕರು ಪುರಸಭೆಗೆ ೭.೫ ಕೋಟಿ ಅನುದಾನ ತಂದಿದ್ದೇನೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆ ಅನುದಾನದಲ್ಲಿ ಈ ರಸ್ತೆಯ ಅಭಿವೃದ್ಧಿಗೆ ಕ್ರೀಯಾಯೋಜನೆ ಸಿದ್ಧಪಡಿಸಿ, ಮುಂದಿನ ಸಾಮಾನ್ಯಸಭೆಯಲ್ಲಿಟ್ಟು ಅನುಮೋದನೆ ಪಡೆದು. ಹದಗೆಟ್ಟ ರಸ್ತೆಯನ್ನು ಮರುನಿರ್ಮಿಸಿಕೊಡುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಪುರಸಭೆಯನ್ನು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಮುಖ್ಯಾಧಿಕಾರಿ ಸುರೇಶ ಎಂ ಕೆ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಅಲ್ಲದೆ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಸುರೇಶ ಎಂ ಕೆ ಅವರು, ಈ ರಸ್ತೆಯನ್ನು ೧೧ ಲಕ್ಷ ರೂ.ಗಳಲ್ಲಿ ಕಾಂಕ್ರೀಟ್ ರಸ್ತೆಯಾಗಿ ನಿರ್ಮಿಸಲು ಕ್ರೀಯಾ ಯೋಜನೆ ಸಿದ್ಧಪಡಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ. ಅಲ್ಲಿಂದ ಪೌರಾಡಳಿತ ನಿರ್ದೇಶನಾಲಯಕ್ಕೆ ಹೋಗಿ ಮಂಜೂರಾದ ಬಳಿಕ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯರಾದ ಗಣಪತಿ ದಿವಾಕರ, ಸುರೇಶ ನಾಯ್ಕ, ಪ್ರೊ. ಎಂ ಜಿ ನಾಯ್ಕ, ಶಿವಾನಂದ ಶೇಟ್, ರಘುವೀರ ಶೇಟ್, ನಾಗೇಶ ಶೆಟ್ಟಿ, ಮಾರುತಿ ಶೇಟ್, ಮೋಹನ ಗೌಡ, ಆರ್ ಎನ್ ನಾಯ್ಕ, ಉಲ್ಲಾಶ ಶಾನಭಾಗ, ಯಶವಂತ ನಾಯ್ಕ ಇತರರು ಇದ್ದರು.

error: