May 15, 2024

Bhavana Tv

Its Your Channel

ಖಾಸಗಿ ವಾಣಿಜ್ಯ ಬಂದರು ಕಾಮಗಾರಿ ಸ್ಥಗೀತಗೊಳಿಸದಿದ್ದರೆ ಹೋರಾಟ ತೀವ್ರ.

ಹೊನ್ನಾವರ: ಮೀನುಗಾರರ ಜೀವನೋಪಾಯಕ್ಕೆ ಮಾರಕವಾಗಿರುವ ಮತ್ತು ಪರಿಸರಕ್ಕೆ ಆತಂಕ ಎದುರಾಗಬಹುದಾದ ಹೊನ್ನಾವರದ ಕಾಸರಕೋಡಿನಲ್ಲಿ ನಿರ್ಮಿಸಲು ಹೊರಟಿರುವ ವಾಣಿಜ್ಯ ಬಂದರು ಕಾಮಗಾರಿಯನ್ನು ತಕ್ಷಣ ಕೈಬಿಡದಿದ್ದರೆ ಸ್ಥಳೀಯ ಮೀನುಗಾರರ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಮತ್ತು ಅಗತ್ಯ ಎಂದು ಕಂಡು ಬಂದರೆ ಜಿಲ್ಲೆಯ ಎಲ್ಲ ಬಾಗಗಳಿಂದಲೂ ಸ್ಥಳೀಯರ ಹೋರಾಟಕ್ಕೆ ಬೆಂಬಲನೀಡಲಾಗುವದಾಗಿ ರಾಷ್ಟ್ರೀಯ ಮೀನುಗಾರರ ಸಂಘಟನೆ, ಪ್ರಾಂತ ರೈತ ಸಂಘ ಮತ್ತು ಕಾರ್ಮಿಕ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಇಂದು ಇಲ್ಲಿ ತಿಳಿಸಿದರು.
ಶನಿವಾರ ರಾಷ್ಟ್ರೀಯ ಮೀನುಗಾರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾoತ ಕೊಚರೇಕರ,ಜಂಟಿ ಕಾರ್ಯದರ್ಶಿ ಅಜೀತ ತಾಂಡೇಲ್, ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯ್ಕ, ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ತಿಲಕ್ ಗೌಡ.ಕಾರ್ಮಿಕರ ತಾಲ್ಲೂಕು ಒಕ್ಕೂಟ ದ ಅಧ್ಯಕ್ಷ ತಿಮ್ಮಪ್ಪ ಗೌಡ ಸೇರಿದಂತೆ ವಿವಿಧ ಮುಖಂಡರು ಕಾಸರಕೋಡ ಟೋಂಕಾಕ್ಕೆ ತೆರಳಿ ಅಲ್ಲಿನಖಾಸಗಿ ಕಂಪೆನಿಯ ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಬಂದರು ಪ್ರದೇಶಕ್ಕೆ ಹೋಗುವ ರಸ್ತೆಯಮೇಲೆ ಧರಣಿನಿರತರಾಗಿರುವ ಮೀನುಗಾರ ಮಹಿಳೆಯರು ಮತ್ತು ಸ್ಥಳೀಯ ಮೀನುಗಾರ ಮುಖಂಡರನ್ನು ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾoತ ಕೊಚರೇಕರ ಮಾತನಾಡಿ ಭೂಮಿಯ ಮಂಜೂರಾತಿ ಪ್ರಕ್ರಿಯೆ ಗಳು ಮತ್ತು ಸ್ಥಳೀಯರು ಪಡುತ್ತಿರುವ ಬವಣೆ, ಬ್ರೇಕ್ ವಾಟರ್ ಸಮಸ್ಯೆ ಹಾಗೂ ವಾಣಿಜ್ಯ ಬಂದರು ನಿರ್ಮಾಣದಿಂದ ಮುಂದೆ ಮೀನುಗಾರಿಕೆ ಮತ್ತು ಹೊನ್ನಾವರ ಪಟ್ಟಣವೂ ಸೇರಿದಂತೆ ಸ್ಥಳೀಯಪರಿಸರದ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಕುರಿತು ಮತ್ತು ಈ ಸಂಬoಧ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ಕಾರ ಏಕಪಕ್ಷೀಯವಾಗಿ ತೆಗೆದುಕೊಂಡಿರುವ ನಿರ್ಧಾರ ಸರಿಯಲ್ಲ. ಕಾಸರಕೋಡ ಪ್ರದೇಶವನ್ನು ಪ್ರವಾಸೋದ್ಯಮ ಸ್ಥಳವನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಒಂದೆಡೆ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಇಕೋ ಬೀಚನ್ನು ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕೆ ಪೂರಕವಾಗಿ ಇನ್ನೊಂದೆಡೆ ಕಾಂಡ್ಲಾನಡಿಗೆ,ಕಾoಡ್ಲಾವನದ ಸಂರಕ್ಷಣೆಗೆ ಸಂಬoಧಿಸಿ ಕೊಟ್ಯಂತರ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಆಗುತ್ತಿದೆ.ಇಲ್ಲಿನ ಸಮುದ್ರದ ಅಂಚು ಪ್ರದೇಶ ವು ಅಪರೂಪದ ಕಡಲಾಮೆಗಳ ಸಂರಕ್ಷಣೆಗೆ ಮೀಸಲಾಗಿರುವ ಪ್ರದೇಶವೆಂದು ಈಗಾಗಲೇ ಘೊಷಿತವಾಗಿದೆ.ಇಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಮೀನುಗಾರಿಕೆಯನ್ನೇ ಅವಲಂಬಿಸಿ ಬದುಕನ್ನು ಕಟ್ಟಿಕೊಂಡಿವೆ.ಕೂಗಳತೆಯಲ್ಲಿ ಹೊನ್ನಾವರ ಪಟ್ಟಣವೂ ಸಹ ಇದೆ. ವಸ್ತುಸ್ಥಿತಿಹೀಗಿರುವಲ್ಲಿ ಇಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡಲು ಹೊರಟಿರುವ ನಿಜವಾದ ಕಾಳಜಿಯ ಹಿಂದೆ ಯಾವ ದುರುದ್ದೇಶವಿದೆ? ಎನ್ನುವ ಕುರಿತು ತಿಳಿದುಕೊಳ್ಳುವ ಹಕ್ಕು ಇಲ್ಲಿಯ ನಾಗರಿಕರಿಗೆ ಇಲ್ಲವೇ? ಎಂದು ಅವರು ಸರ್ಕಾರವನ್ನು ಪ್ರಶ್ನಿಸಿ. ನಾವು ಅಭಿವೃದ್ಧಿಯ ವಿರೋಧಿಯಲ್ಲ. ಆದರೆ ಮೇಲೆ ಹೇಳಿರುವ ಪರಿಸರ ಮತ್ತು ಲಕ್ಷಾಂತರ ಮೀನುಗಾರರ ಬದುಕಿನ ಪ್ರಶ್ನೆ ಇಲ್ಲಿ ಮಹತ್ವದ್ದು. ಆದ್ದರಿಂದ ಸ್ಥಳೀಯ ಮೀನುಗಾರರ ಹೊರಾಟಕ್ಕೆ ತಮ್ಮ ಸಂಘಟನೆಯ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರಕಟಿಸಿ ಜಿಲ್ಲೆಯ ವಿವಿಧ ಸಂಘಟನೆಗಳೂ ಸಹ ಮೀನುಗಾರರ ಈ ಹೋರಾಟಕ್ಕೆ ಬೆಂಬಲ ನೀಡಿ ಸಹಕರಿಸಬೇಕೆಂದು ಅವರು ಈ ಸಂದರ್ಭದಲ್ಲಿ ವಿನಂತಿಸಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯ್ಕ ಮಾತನಾಡಿ ಸ್ಥಳೀಯರ ವಿರೋಧದ ನಡುವೆಯೂ ಹೊನ್ನಾವರ ಕಾಸರಕೋಡಿನಲ್ಲಿ ವಾಣಿಜ್ಯ ಬಂದರು ನಿರ್ಮಿಸಲು ಸರ್ಕಾರವು ಹೈದರಾಬಾದ್ ಮೂಲದ ಹೊನ್ನಾವರ ಪೋರ್ಟ ಪ್ರೈವೆಟ್ ಲಿಮಿಟೆಡ್ ರವರಿಗೆ ವಹಿಸಿದ್ದು ಸರಿಯಲ್ಲ.ಸರಕಾರ ಮೊದಲು ಇಲ್ಲಿಯ ಬ್ರೇಕ್ ವಾಟರ್ ಸಮಸ್ಯೆಗಳನ್ನು ಬಗೆಹರಿಸದೇ ಖಾಸಗಿಕಂಪನಿಗೆ ವಾಣಿಜ್ಯ ಬಂದರು ನಿರ್ಮಿಸಲು ಅವಕಾಶ ಮಾಡಿಕೊಟ್ಟಿರುವದು ಸರಿಯಲ್ಲ. ಇದು ದುರ್ದೈವದ ಸಂಗತಿ . ಮೀನುಗಾರರ ಬದುಕಿನೊಂದಿಗೆ ಚೆಲ್ಲಾಟವಾಡುವ ಸರ್ಕಾರದ ದ್ವಂದ್ವ ನೀತಿ ಸರಿಯಲ್ಲ. ಕಬ್ಬಿಣದ ಅದಿರು ಸಂಗ್ರಹ ಮತ್ತು ರಪ್ತಿಗೆ ಸಂಬoಧಿಸಿ ರಹಸ್ಯ ಕಾರ್ಯಸೂಚಿ ಇರುವ ಖಾಸಗಿ ಕಂಪನಿಗೆ ಇಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸರ್ಕಾರ ಅವಕಾಶಮಾಡಿಕೊಟ್ಟಿದೆ ಎನ್ನಲಾಗುತ್ತಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಆಡಳಿತ ರೂಡರು ಶಾಮೀಲಾಗದೇ ಇದು ಸಾಧ್ಯವಿಲ್ಲ ಎಂದರು.
ಪ್ರಸ್ತುತ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ರೈತರು ಮತ್ತು ಮೀನುಗಾರರ ಹಿತಾಸಕ್ತಿಗೆ ವಿರುದ್ಧವಾಗಿ ಜಾರಿಗೆ ತರಲು ಹೊರಟಿರುವ 3 ಕ್ರಷಿ ಕಾಯ್ದೆಗಳನ್ನು ಹಿಂಪಡೆಯಲು ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕಲು ನಡೆಯುತ್ತಿರುವ ವಿದ್ಯಮಾನಗಳನ್ನು ಉಧಾಹರಿಸಿದ ಅವರು ಇಲ್ಲಿನ ವಿದ್ಯಮಾನಗಳನ್ನು ಗಮನಿಸಿದರೆ ನಿಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳು ಸಹ ಆಗುತ್ತಿರುವ ಅನುಮಾನ ವ್ಯಕ್ತಪಡಿಸಿ ಎಂತಹ ಕಠಿಣ ಪರಿಸ್ಥಿತಿಎದುರಾದರೂ ಸರಿ ನೀವು ಮಾತ್ರ ಹೋರಾಟದಿಂದ ಹಿಂದೆ ಸರಿಯಬೇಡಿ. ನಿಮ್ಮ ಹೋರಾಟದಲ್ಲಿ ತಮ್ಮ ಸಂಘಟನೆ ನಿಮ್ಮೊಂದಿಗೆ ಇರುತ್ತದೆಂದು ಧರಣಿ ನಿರತರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಕಾರ್ಮಿಕ ಮುಖಂಡ ತಿಲಕ ಗೌಡ ಮಾತನಾಡಿ ಸರ್ಕಾರ ಹೊನ್ನಾವರ ತಾಲ್ಲೂಕಿನಲ್ಲಿ ಈ ಬಂದರನ್ನು ನಿರ್ಮಿಸುವ ಮೂಲಕ ಮೀನುಗಾರಿಕೆಯನ್ನೇ ಅವಲಂಬಿತರಾಗಿರುವ ಸಾವಿರಾರು ಕುಟುಂಬಗಳ ಬದುಕನ್ನು ಕಸಿದುಕೊಳ್ಳುತ್ತಿದೆ. ಆದುದರಿಂದ ತಕ್ಷಣ ಈ ವಾಣಿಜ್ಯ ಬಂದರಿನ ಕಾಮಗಾರಿಯನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಮೀನುಗಾರರ ಸಂಘಟನೆ ಗಳೊಂದಿಗೆ ನಾವು ಸಹ ಮೀನುಗಾರರ ಬೆಂಬಲಕ್ಕೆ ನಿಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಮೀನುಗಾರರೊಂದಿಗೆಕೈಜೋಡಿಸಿ ಹೋರಾಟಕ್ಕೆ ಧುಮುಕಬೇಕಾದೀತು ಏನ್ನುವ ಎಚ್ಚರಿಕೆ ನೀಡಿದರು. ಸರ್ಕಾರ ತಕ್ಷಣ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯನ್ನು ಕೈಬಿಡಬೇಕೆಂದು ಅವರು ಆಗ್ರಹಿಸಿದರು.

   ಈ ಸಂದರ್ಭದಲ್ಲಿ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ  ಅಜೀತ ತಾಂಡೇಲ್, ಹೊನ್ನಾವರ ಪರ್ಸಿನ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಅಮ್ಜಾ ಪಟೇಲ್, ಮುಖಂಡರಾದ. ಸುಧಾ ತಾಂಡೇಲ, ಗ್ರಾ. ಪಂ. ಸದಸ್ಯೆ ಪ್ರೀತಿ ತಾಂಡೇಲ, ಶೇಷಗಿರಿ ತಾಂಡೇಲ್, ಹಸಿಮೀನು ವ್ಯಾಪರಸ್ಥರ ಸಂಘದ ಅಧ್ಯಕ್ಷ ಗಣಪತಿ ಈಶ್ವರ ತಾಂಡೇಲ್, ಮೀನುಗಾರರ ಕಾರ್ಮಿಕರ ಸಂಘದ ಉಪಾಧ್ಯಕ್ಷ ರಾಜೇಶ ತಾಂಡೇಲ,ಭಾಷಾ ಪಟೇಲ್, ವಿವನ್ ಫರ್ನಾಂಡಿಸ್ ಸಂದೀಪ ತಾಂಡೇಲ್, ರೇಣುಕಾ ಜಿ. ಉಷಾ ಸುಖಚಂದ್ರ,ದಿಲ್ಶಾದ ಬೇಗಂ, ರೇಖಾ ತಾಂಡೇಲ್ ಹಾಗೂ ವಿವಿಧ ಮೀನುಗಾರರ ಮುಖಂಡರು ಉಪಸ್ಥಿತರಿದ್ದರು ಸ್ಥಳೀಯ ಮುಖಂಡ ಜಗದೀಶ ತಾಂಡೇಲ್ ಅಭಿನಂದನೆ ಸಲ್ಲಿಸಿದರು. ಸ್ಥಳದಲ್ಲಿ ವ್ಯಾಪಕ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದುಬಿಗುವಿನ ವಾತಾವರಣ ಇರುವದು ಮೇಲ್ನೋಟಕ್ಕೆ ಕಂಡು ಬಂದಿದೆ.  ಹೊನ್ನಾವರ ಸಿಪಿಐ ಶ್ರೀಧರ್. ಸಹಿತ ಹಲವಾರು ಉನ್ನತ ಪೊಲೀಸ್ ಅಧಿಕಾರಿಗಳ ತಂಡ ಸ್ಥಳದಲ್ಲಿ ಬೀಡುಬಿಟ್ಟಿದೆ. ಸ್ಥಳೀಯರ ಈ ಹೋರಾಟ ಇನ್ನಷ್ಟು ತೀವ್ರತೆ ಪಡೆಯುವ ಲಕ್ಷಣಗಳಿದ್ದು ಬ್ರಹತ್ ಪ್ರಮಾಣದ ಪ್ರತಿಭಟನೆಗೆ ಪೂರ್ವ ಸಿದ್ಧತೆನಡೆಯುತ್ತಿರುವದು ಕಂಡು ಬಂದಿದೆ.
error: